ಬೆಂಗಳೂರು: ಕಳೆದ ಮುಂಗಾರು ಹಂಗಾಮಿನಲ್ಲಿ ಬರಗಾಲದಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭಿಸಲಾಗಿದೆ.
ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್.ನಿಂದ ಬಿಡುಗಡೆ ಮಾಡಿದ 3454.22 ಕೋಟಿ ರೂ.ಗಳನ್ನು ಅರ್ಹ ರೈತರಿಗೆ ತಲುಪಿಸುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಪರಿಹಾರದ ಮೊತ್ತವನ್ನು ನೇರವಾಗಿ ವರ್ಗಾಯಿಸಲು ಆದೇಶಿಸಲಾಗಿದೆ. ಕಳೆದ ಜನವರಿಯಲ್ಲಿ ರೈತರಿಗೆ ಗರಿಷ್ಠ 2000 ರೂ.ವರೆಗೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರ ಪಾವತಿಸಿದ್ದು, ಆ ಮೊತ್ತ ಕಡಿತ ಮಾಡಿಕೊಂಡು ಮಾರ್ಗಸೂಚಿ ಅನ್ವಯ ಪರಿಹಾರ ಮೊತ್ತ ಪಾವತಿಸುವಂತೆ ಸೂಚಿಸಲಾಗಿದೆ.
ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಗರಿಷ್ಠ ಎರಡು ಹೆಕ್ಟರ್ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿಪಡಿಸಲಾಗಿದೆ. ಮಳೆಯಾಶ್ರಿತ ಬೆಳೆಗೆ 8,500 ರೂ., ನೀರಾವರಿ ಪ್ರದೇಶದ ಬೆಳೆಗೆ 17,000 ರೂ., ತೋಟಗಾರಿಕೆ ಬೆಳೆಗೆ 22,500 ರೂ. ಪರಿಹಾರ ನಿಗದಿಪಡಿಸಲಾಗಿದೆ.