ಬಾಗಲಕೋಟೆ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕ್ರಣವನ್ನು ಲವ್ ಜಿಹಾದ್ ಎಂದು ಹೇಳಿರುವ ಕೇಂದ್ರ ಗೃಹ ಸಚಿವರ ಹೇಳಿಕೆಗೆ ಕಿಡಿ ಕಾರಿರುವ ಸಿಎಂ ಸಿದ್ದರಾಮಯ್ಯ, ರಾಜಕೀಯಕ್ಕೋಸ್ಕರ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೇಹಾ ಹತ್ಯೆ ಪ್ರಕರಣವನ್ನು ನಾವು ತಕ್ಷಣ ಸಿಐಡಿಗೆ ವಹಿಸಿದ್ದೇವೆ. ಘಟನೆ ನಡೆದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಾನೂನು ರೀತಿ ಏನೆಲ್ಲ ಮಾಡಲು ಸಾಧ್ಯವೋ ಎಲ್ಲವನ್ನೂ ಸರ್ಕಾರ ಮಾಡುತ್ತಿದೆ. ಆದರೆ ಅಮಿತ್ ಶಾ ಅವರು ನೇಹಾ ಹತ್ಯೆಯನ್ನು ಲವ್ ಜಿಹಾದ್ ಎಂದು ಹೇಳಿದ್ದಾರೆ. ರಾಜಕೀಯಕ್ಕೋಸ್ಕರ ಇಂತಹ ಹೇಳಿಕೆ ಸರಿಯಲ್ಲ. ನೇಹಾ ಹತ್ಯೆ ಪ್ರಕರಣದ ಬಗ್ಗೆ ಮಾತನಾಡುವ ಕೇಂದ್ರ ಗೃಹ ಸಚಿವರು ಮಣಿಪುರ ಹಿಂಸಾಚಾರದ ಬಗ್ಗೆ ಯಾಕೆ ಒಂದು ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಮಣಿಪುರ ಘಟನೆ, ಅಲ್ಲಿನ ಹಿಂಸಾಚಾರಗಳ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಅಲ್ಲಿರುವ ಸರ್ಕಾರವನ್ನೇ ಮುಂದುವರೆಸಿದ್ದಾರೆ ಕೇಂದ್ರ ಗೃಹ ಸಚಿವರಾಗಿದ್ದುಕೊಂಡು ನೀವು ಏನು ಮಾಡಿದಿರಿ? ಮುಖ್ಯಮಂತ್ರಿಯನ್ನು ಬದಲಿಸಿದಿರಾ? ಅಥವಾ ಸರ್ಕಾರವನ್ನು ವಜಾ ಮಾಡಿದಿರಾ? ಎಂದು ಕೇಳಿದ್ದಾರೆ.