alex Certify ಚೆಕ್ ಪೋಸ್ಟ್ ಕರ್ತವ್ಯ ನಿರ್ಲಕ್ಷ್ಯ; ಲೋಕೋಪಯೋಗಿ ಇಲಾಖೆ ಎಇಇ, ಪಂಚಾಯಿತಿ ಬಿಲ್ ಕಲೆಕ್ಟರ್ ಅಮಾನತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆಕ್ ಪೋಸ್ಟ್ ಕರ್ತವ್ಯ ನಿರ್ಲಕ್ಷ್ಯ; ಲೋಕೋಪಯೋಗಿ ಇಲಾಖೆ ಎಇಇ, ಪಂಚಾಯಿತಿ ಬಿಲ್ ಕಲೆಕ್ಟರ್ ಅಮಾನತು

ದಾವಣಗೆರೆ: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಹೊನ್ನಾಳಿ ವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಣವಪ್ಪ ಮತ್ತು ನ್ಯಾಮತಿ ತಾಲ್ಲೂಕು ಯರಗನಾಳ್ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಲೋಕೇಶ್ ನಾಯ್ಕ ಇವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.

ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಮೇ 7 ರಂದು ಮತದಾನ ನಡೆಯಲಿದೆ. ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲು ಜಿಲ್ಲೆಯಾದ್ಯಂತ 32 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ದಾವಣಗೆರೆ, ಶಿವಮೊಗ್ಗದ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಜೀನಹಳ್ಳಿ ಚೆಕ್ ಪೋಸ್ಟ್ ಗೆ ಸದರಿ ಅಧಿಕಾರಿ, ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು.

ದಾವಣಗೆರೆ ಕ್ಷೇತ್ರಕ್ಕೆ ಆಯೋಗದಿಂದ ನೇಮಕವಾಗಿರುವ ವಿಶೇಷ ವೆಚ್ಚ ವೀಕ್ಷಕರಾದ ಪ್ರತಿಭಾಸಿಂಗ್ ಮತ್ತು ಹೊನ್ನಾಳಿ ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಅಭಿಷೇಕ್ ರವರು ಏಪ್ರಿಲ್ 29 ರಂದು ಮಧ್ಯಾಹ್ನ 2.25 ರ ಸಮಯದಲ್ಲಿ ಅನಿರೀಕ್ಷಿತವಾಗಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿದಾಗ ಕರ್ತವ್ಯದಲ್ಲಿ ಯಾರೂ ಸಹ ಇರಲಿಲ್ಲ. ಈ ಬಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

ಚುನಾವಣಾ ಕರ್ತವ್ಯ ನಿರ್ಲಕ್ಷ್ಯತೆ ತೋರಿದ ಸದರಿ ನೌಕರರ ಮೇಲೆ ಪ್ರಜಾ ಪ್ರಾತಿನಿಧ್ಯಕಾಯ್ದೆ 1951 ರ 134 ನಿಯಮದನ್ವಯ ಹಾಗೂ ಸಿಸಿಎ ನಿಯಮ 1957 ರ ನಿಯಮ 10(1)(ಡಿ) ರನ್ವಯ ಅಮಾನತು ಮಾಡಿ ಆದೇಶಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...