ಬೆಂಗಳೂರು: ರಾಜ್ಯದಲ್ಲಿ ಪಿಎಂಶ್ರೀ ಯೋಜನೆಯಡಿ 254 ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
2022 -23ನೇ ಸಾಲಿನಲ್ಲಿ ಮೊದಲ ಬಾರಿಗೆ 129 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಹೊಸದಾಗಿ 254 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಉದ್ದೇಶದಿಂದ ಪಿಎಂಶ್ರೀ ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 383 ಶಾಲೆಗಳು ಅಭಿವೃದ್ಧಿ ಆಗುತ್ತಿದ್ದು, ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಸುಧಾರಣೆ ತರಲು ಅನುಕೂಲವಾಗಲಿದೆ.
ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 507 ಶಾಲೆಗಳನ್ನು ಅಭಿವೃದ್ಧಿಪಡಿಸಲು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕೇಂದ್ರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 254 ಶಾಲೆಗಳಿಗೆ ಅನುಮೋದನೆ ದೊರೆತಿದೆ. ಈ ಶಾಲೆಗಳಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಅವಶ್ಯಕವಾಗಿರುವ ಕೌಶಲ ಪೂರ್ಣ ಶಿಕ್ಷಣ, ಸಮಗ್ರ ಮತ್ತು ಸುಸಜ್ಜಿತ ವ್ಯಕ್ತಿತ್ವ ನಿರ್ಮಿಸಲಾಗುತ್ತದೆ. ಹೆಚ್ಚು ಪ್ರಾಯೋಗಿಕ ಸಮಗ್ರ ಶಿಕ್ಷಣ ನೀಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಅವಶ್ಯಕ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.
ಕೆಪಿಎಸ್ ಮಾದರಿಯಲ್ಲಿ ಪಿಎಂಶ್ರೀ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದ ದ್ವಿತೀಯ ಪಿಯುಸಿ ವರೆಗೆ ಒಂದೇ ಕಡೆ ಶಿಕ್ಷಣ ದೊರೆಯಲಿದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಮೂಲ ಸೌಕರ್ಯಕ್ಕೆ ಅಗತ್ಯವಾದ ಪೀಠೋಪಕರಣ ತಂತ್ರಜ್ಞಾನ ಆಧಾರಿತ ಕಲಿಕೆಗೆ ಬೇಕಾದ ಉಪಕರಣಗಳ ಖರೀದಿಗೆ ಅನುದಾನ ನೀಡಲಾಗುವುದು.