ದಾವಣಗೆರೆ: ಕಳೆದ 16 ವರ್ಷಗಳಿಂದ ಮಕ್ಕಳಿಲ್ಲದೆ ನಿರಾಸೆಯಾಗಿದ್ದ ಬಳ್ಳಾರಿ ಮೂಲದ ದಂಪತಿಗಳು ಸರ್ಕಾರದಿಂದ 4 ತಿಂಗಳ ಗಂಡು ಮಗುವನ್ನು ದತ್ತು ಪಡೆದಿದ್ದಾರೆ.
ದಾವಣಗೆರೆ ಜಿಲ್ಲಾ ದತ್ತು ಸ್ವೀಕಾರ ಕೇಂದ್ರದಿಂದ ಬಳ್ಳಾರಿ ಮೂಲದ ದಂಪತಿಗಳು ಸೋಮವಾರ ಮಗುವನ್ನು ದತ್ತು ಪಡೆದಿದ್ದು, ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಅವರು ಮಗುವನ್ನು ದತ್ತು ನೀಡಿದರು.
ಮಕ್ಕಳಿಲ್ಲದವರು ಮತ್ತು ಮಕ್ಕಳನ್ನು ಸಾಕಲು ಸಾಕ ಬಯಸುವ ಪೋಷಕರು ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇರುತ್ತದೆ. ಪ್ರತಿಯೊಂದು ಜಿಲ್ಲೆಯಲ್ಲಿ ದತ್ತು ಸ್ವೀಕಾರ ಕೇಂದ್ರಗಳಿರುತ್ತವೆ. ಅನಾಥವಾಗಿರುವ ಮಗು, ಮಗು ಬೇಡವಾದ ದಂಪತಿಗಳಿಂದ ಮಗು ಸ್ವೀಕಾರ, ಮಗು ಪೋಷಣೆ ಮಾಡಲು ಸಾಧ್ಯವಾಗದವರಿಂದ ಮಗುವನ್ನು ಈ ಕೇಂದ್ರದಲ್ಲಿ ಪಡೆಯಲಾಗುತ್ತದೆ. ಈ ಮಗುವನ್ನು ಇಲ್ಲಿ ಪಾಲನೆ ಪೋಷಣೆ ಮಾಡಿ ಮಗುವಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರದಿಂದ ಕಲ್ಪಿಸಿ ಮಗುವನ್ನು ಪಾಲನೆ, ಪೋಷಣೆ ಮಾಡಲಾಗುತ್ತದೆ.
ದತ್ತು ಸ್ವೀಕಾರದಲ್ಲಿನ ಮಗುವನ್ನು ಬೇರೆ ಪೋಷಕರು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ನಿಯಮಗಳಿರುತ್ತವೆ. ಮಗು ಬೇಕಾದವರು ಸೆಂಟ್ರಲ್ ಅಡಾಪ್ಷನ್ ರೀಸೋರ್ಸ್ ಅಥಾರಿಟಿ ಮತ್ತು ಸ್ಟೇಟ್ ಅಡಾಪ್ಷನ್ ರೀಸೋರ್ಸ್ ಅಥಾರಿಟಿ ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಿಸಬೇಕು. ಮಕ್ಕಳಿಲ್ಲದ ಪೋಷಕರು ಮಗು ದತ್ತು ಪಡೆಯಲು ನೋಂದಣಿ ನಂತರ ದಂಪತಿಗಳಿಬ್ಬರ ವಯೋಮಾನದ ಆಧಾರದ ಮೇಲೆ ಯಾವ ವಯಸ್ಸಿನ ಮಗು ದತ್ತು ಪಡೆಯಬಹುದೆಂದು ಮ್ಯಾಚ್ ಮಾಡಲಾಗುತ್ತದೆ. ಅವರ ವಯೋಮಾನ ಮತ್ತು ಷರತ್ತುಗಳನ್ನು ಪೂರೈಸಿದ ಪೋಷಕರಿಗೆ ಮಗು ದತ್ತು ನೀಡಲು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.
ಇಂದು ದತ್ತು ಪಡೆದ ದಂಪತಿಗಳು ವಿವಾಹವಾಗಿ 16 ವರ್ಷಗಳಿಂದ ಮಕ್ಕಳಿರಲಿಲ್ಲ, ಇವರು ಸುಮಾರು 40-45 ವರ್ಷದ ವಯೋಮಾನದ ಪೋಷಕರಾಗಿರುವರು. ಇವರಿಗೆ ನಾಲ್ಕು ತಿಂಗಳ ಮಗು ಮ್ಯಾಚ್ ಆಗಿದ್ದರಿಂದ ದತ್ತು ನೀಡಲಾಗಿದೆ. ಇವರು ನೋಂದಣಿ ಮಾಡಿಸಿ ಕಳೆದ 3 ವರ್ಷಗಳಿಂದ ದತ್ತು ಪಡೆಯಲು ಕಾಯುತ್ತಿದ್ದರು.
ಪೋಷಕರು ದತ್ತು ಸ್ವೀಕರಿಸಿದ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ.ಟಿ, ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ್, ಅಧೀಕ್ಷಕರಾದ ಲತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.