ಶಿವಮೊಗ್ಗ: ‘ಹಣೆಗೆ ಕುಂಕುಮ ಇಡುವ ಸಂಸ್ಕೃತಿಯನ್ನು ಟೀಕಾಕಾರರಿಂದ ಕಲಿಯಬೇಕಿಲ್ಲ. ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ರಾಜಕಾರಣಿಗಳಾಗಲಿ ವಿಡಿಯೋಗಳನ್ನು ತಿರುಚಿ ಅಪಪ್ರಚಾರ ನಡೆಸುವ ಮೊದಲು ಪ್ರಜ್ಞಾವಂತಿಕೆ ರೂಢಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಗುಡುಗಿದ್ದಾರೆ.
ಅರತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಸ್ಲಿಂ ಮತದಾರರ ಓಲೈಕೆಗೆ ಹಣೆಯಲ್ಲಿದ್ದ ಕುಂಕುಮ ಅಳಸಿಕೊಂಡು ಪ್ರಚಾರ ಸಭೆಯಲ್ಲಿ ಗೀತಾ ಶಿವರಾಜಕುಮಾರ್ ಪಾಲ್ಗೊಂಡಿದ್ದರೆಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ವಾಸ್ತವವನ್ನು ಅರಿತು ಅಪಪ್ರಚಾರ ನಡೆಸಬೇಕು ಎಂದು ಕುಟುಕಿದ್ದಾರೆ.
ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಕಡೆಗಳಲ್ಲಿ ಮಹಿಳೆಯರು ತವರು ಮನೆಯ ಪ್ರೀತಿ- ವಾತ್ಸಲ್ಯ ತೋರುತ್ತಿದ್ದಾರೆ. ಹಣೆಗೆ ಕುಂಕುಮ ಇರಿಸಿ, ಉಡಿ ತುಂಬಿ ಹರಸುತ್ತಿದ್ದಾರೆ. ಇಲ್ಲಿ, ಬಿಸಿಲ ಝಳ ಹೆಚ್ಚಿದೆ. ಬೆವರಿಗೆ ಕುಂಕುಮ ಮುಖದ ತುಂಬೆಲ್ಲಾ ಹರಡುತ್ತದೆ ಎನ್ನುವ ಕಾರಣಕ್ಕೆ ಮಾತ್ರ ಕೆಲವು ಭಾರಿ ಕುಂಕುಮದ ಗಾತ್ರ ಚಿಕ್ಕದು ಮಾಡಿಕೊಂಡಿರಬಹುದು. ಇದನ್ನೇ ತಿರುಚಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನರು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿಗರಿಗೆ ಟೀಕಿಸಲು ವಿಚಾರ ಇಲ್ಲದಂತಾಗಿದೆ. ಅದೇ ರೀತಿ, ಪಕ್ಷದಿಂದ ಹೊರಗುಳಿದು ಪಕ್ಷದ ಅಸ್ತಿತ್ವವೇ ಇಲ್ಲದವರೂ ಕೂಡ ಇಲ್ಲಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಟೀಕಿಸುವ ಮೊದಲು ಪಕ್ಷದ ಅಸ್ತಿತ್ವ ಕಂಡುಕೊಳ್ಳಲಿ ಎಂದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜಕುಮಾರ್ ಅವರು ಸಮರ್ಥ ಸಂಸದರಾಗಿ ಹೊರಹೊಮ್ಮಲಿದ್ದಾರೆ. ಇಲ್ಲಿನ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗೀತಾ ಅವರಿಗೆ ಮತ ನೀಡಿ ಹರಸಬೇಕು ಎಂದು ಮನವಿ ಮಾಡಿದರು.
ನಟ ಶಿವರಾಜ್ ಕುಮಾರ್, ಪ್ರಮುಖರಾದ ಜಿ. ಪಲ್ಲವಿ, ವೈ.ಹೆಚ್. ನಾಗರಾಜ್, ಹನುಮಂತು, ಉಮೇಶ್, ಶಾಂತವೀರ ನಾಯ್ಕ್ ಮೊದಲಾದವರು ಇದ್ದರು.