ನವದೆಹಲಿ: ಕಾಂಗ್ರೆಸ್ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ನೀಡಿದ ಪಿತ್ರಾರ್ಜಿತ ತೆರಿಗೆ ಹೇಳಿಕೆ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಸಮರಕ್ಕೆ ಕಾರಣವಾಗಿದೆ.
ಅಮೆರಿಕದಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ ನೀತಿಗಳನ್ನು ಸ್ಯಾಮ್ ಪಿತ್ರೋಡಾ ಸಂದರ್ಶನವೊಂದರಲ್ಲಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲಿನ ಸಂಪತ್ತಿನ ಮರುಹಂಚಿಕೆ ನಿಯಮ ಪ್ರಸ್ತಾಪಿಸಿ ಅಮೆರಿಕದಲ್ಲಿ ಪಿತ್ರಾರ್ಜಿತ ತೆರಿಗೆ ಪದ್ಧತಿ ಇದೆ. ಒಬ್ಬ ವ್ಯಕ್ತಿ 10 ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದರೆ ಅವರು ಮೃತಪಟ್ಟಾಗ ಕೇವಲ ಶೇಕಡ 45ರಷ್ಟು ಆಸ್ತಿಯನ್ನು ಮಕ್ಕಳಿಗೆ ವರ್ಗಾಯಿಸಬಹುದು. ಉಳಿದ ಶೇಕಡ 55 ರಷ್ಟು ಸ್ವತ್ತನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯುತ್ತದೆ. ಇದೊಂದು ಆಸಕ್ತಿದಾಯಕ ಕಾನೂನು, ನ್ಯಾಯೋಚಿತ ಕ್ರಮವಾಗಿದೆ. ಈ ಬಗ್ಗೆ ಚರ್ಚೆ ಅಗತ್ಯ ಎಂದು ಹೇಳಿದ್ದಾರೆ.
ಈ ಹೇಳಿಕೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.
ಕಾಂಗ್ರೆಸ್ ಇಷ್ಟು ದಿನ ಜೀವಂತ ಇದ್ದವರಿಂದ ಹಣ ಲೂಟಿ ಮಾಡಿದೆ. ಈಗ ಪಿತ್ರಾರ್ಜಿತ ತೆರಿಗೆಯ ಮೂಲಕ ಮೃತ ವ್ಯಕ್ತಿಯ ಆಸ್ತಿಯೂ ಮಕ್ಕಳಿಗೆ ಸಿಗದಂತೆ ಮಾಡಲು ಸಂಚು ರೂಪಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಜನರು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಕಾಂಗ್ರೆಸ್ ಬಿಡುವುದಿಲ್ಲ. ಇದರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಯಾಮ್ ಪಿತ್ರೋಡಾ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ತಮ್ಮ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದ್ದಾರೆ.
ಪಿತ್ರೋಡಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದು, ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ನಿಲುವಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.