ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿ ಲೋಪ ಉಂಟಾಗಿದ್ದು, ಇದರ ಬಗ್ಗೆ ಪರಿಶೀಲನೆಗೆ ನಾಲ್ಕು ಸಮಿತಿಗಳನ್ನು ರಚಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರ್ಪಡೆಯಾಗಿದ್ದನ್ನು ಪರಿಶೀಲಿಸಿ ವರದಿ ನೀಡಲು ಆಯಾ ವಿಷಯವಾರು ತಜ್ಞರನ್ನು ಒಳಗೊಂಡ 4 ಸಮಿತಿಗಳನ್ನು ರಚಿಸಲಾಗಿದೆ.
ಏಪ್ರಿಲ್ 18 ಮತ್ತು 19ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಪರೀಕ್ಷೆ ನಡೆಸಿತ್ತು. ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಭೌತಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ಕೆ ಹೊರತಾದ ಶೇಕಡ 25 ರಷ್ಟು ಪ್ರಶ್ನೆಗಳು ಸೇರಿವೆ ಎಂದು ವಿದ್ಯಾರ್ಥಿಗಳು, ಉಪನ್ಯಾಸಕರು ಆಕ್ಷೇಪಿಸಿದ್ದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿರುವ ಉನ್ನತ ಶಿಕ್ಷಣ ಇಲಾಖೆ ಆಯಾ ವಿಷಯಗಳಿಗೆ ತಲಾ ಮೂವರು ಸದಸ್ಯರನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಿದೆ.