ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆದುಕೊಳ್ಳಲು ಏ. 22 ಕೊನೆಯ ದಿನವಾಗಿದೆ. ಇಂದು ಸಂಜೆಯ ನಂತರ ಚುನಾವಣಾ ಅಖಾಡದ ಚಿತ್ರಣ ಸ್ಪಷ್ಟವಾಗಲಿದೆ.
ಶಿವಮೊಗ್ಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುವ ಸಾಧ್ಯತೆ ಖಚಿತವಾಗಿದೆ. ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರರಾಗಿ ಸ್ಪರ್ಧಿಸಿದ್ದು, ದಾವಣಗೆರೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ವಿನಯ್ ಕುಮಾರ್ ಸ್ಪರ್ಧಿಸಿದ್ದಾರೆ. ಧಾರವಾಡ ಮತ್ತು ಶಿವಮೊಗ್ಗದಲ್ಲಿ ಬಿಜೆಪಿಗೆ ಸವಾಲು ಎದುರಾಗಿದ್ದರೆ, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಬಂಡಾಯ ಎದುರಾಗಿದೆ. ಈ ಮೂವರು ಕಣದಲ್ಲಿ ಉಳಿದರೆ ಬಿಜೆಪಿ, ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಲಿದೆ.
ಯಡಿಯೂರಪ್ಪ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ ಈಶ್ವರಪ್ಪ ಈಗಾಗಲೇ ಕ್ಷೇತ್ರದಾದ್ಯಂತ ಸಂಚರಿಸಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆದುಕೊಳ್ಳುವ ಸಾಧ್ಯತೆ ಇಲ್ಲ. ಹೀಗಾಗಿ ಅವರ ಮನವೊಲಿಸುವ ಪ್ರಯತ್ನವನ್ನು ಬಿಜೆಪಿ ಕೈಬಿಟ್ಟಿದೆ. ರಾಜ್ಯ ಬಿಜೆಪಿ ನಾಯಕರು ಅನೇಕ ಬಾರಿ ಮನವಿ ಮಾಡಿದರೂ ಬಗ್ಗದ ಈಶ್ವರಪ್ಪ ಚುನಾವಣೆ ಕಣದಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಕೊನೆಯ ಪ್ರಯತ್ನವಾಗಿ ಸಂಘ ಪರಿವಾರದ ಪ್ರತಿನಿಧಿಗಳು ಈಶ್ವರಪ್ಪ ಅವರೊಂದಿಗೆ ಮಾತನಾಡಿ ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಧಾರವಾಡದಲ್ಲಿ ಲಿಂಗಾಯಿತ ಸ್ವಾಭಿಮಾನದ ಹೆಸರಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸುವ ಮೂಲಕ ಬಿಜೆಪಿಗೆ ಸವಾಲು ಎದುರಾಗಿದೆ. ಕಣದಿಂದ ಹಿಂದೆ ಸರಿಯುವಂತೆ ಅನೇಕ ನಾಯಕರು ಮನವಿ ಮಾಡಿದ್ದರೂ ಸ್ವಾಮೀಜಿ ಒಪ್ಪಿಕೊಂಡಿಲ್ಲ.
ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿನಯ್ ಕುಮಾರ್ ಕಣದಲ್ಲಿ ಉಳಿಯುವುದಾಗಿ ಹೇಳಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು ಈ ಮೂವರ ನಡೆ ಕುತೂಹಲ ಮೂಡಿಸಿದೆ.