ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಮತ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏ.20 ರಂದು ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ.
ಏ.12 ರಿಂದ 19 ರವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 38 ನಾಮಪತ್ರಗಳ ಸಲ್ಲಿಕೆಯಾಗಿತ್ತು. ಶನಿವಾರ ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಆಮ್ ಆದ್ಮಿ ಪಕ್ಷದ ಸುಭಾನ್ ಖಾನ್ ಎಂಬ ಅಭ್ಯರ್ಥಿ ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿದೆ.
ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಚಂದ್ರಶೇಖರ್ ಹೆಚ್.ಸಿ ಮತ್ತು ಬಹುಜನ ಮುಕ್ತಿ ಪಾರ್ಟಿಯ ಜಿ. ಜಯದೇವ ಅವರ ನಾಮಪತ್ರಗಳನ್ನು ಮಾನ್ಯ ಮಾಡಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ ಪರಿಗಣಿಸಲಾಗಿದೆ. ನಾಮಪತ್ರಗಳ ಪರಿಶೀಲನೆ ನಂತರ 26 ಅಭ್ಯರ್ಥಿಗಳ ನಾಮಪತ್ರಗಳನ್ನು ಮಾನ್ಯ ಮಾಡಲಾಗಿದೆ. ಏ.22 ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು ಮೇ 7 ರಂದು ಮತದಾನ ನಡೆಯಲಿದೆ.