ದಾವಣಗೆರೆ: ದ್ವಿತೀಯ ಪಿಯುಸಿವರೆಗೆ ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಕೃಷಿಯೊಂದಿಗೆ ಯುಪಿಎಸ್‍ಸಿ ನಡೆಸುವ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ 101 ನೇ ರ್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಇವರಿಗೆ ಏಪ್ರಿಲ್ 17 ರಂದು ಅಭಿನಂದನಾ ಪತ್ರ ಹಾಗೂ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಮೂಲಕ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಸನ್ಮಾನಿಸಿ ಗೌರವಿಸಿದರು.
ದಾವಣಗೆರೆಯಲ್ಲಿ ಓದಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಲಾಗಿದೆ. ಯಾವುದೇ ಕೋಚಿಂಗ್ ಕೇಂದ್ರದಲ್ಲಿ ತರಬೇತಿ ಪಡೆಯದೇ ಪುಸ್ತಕಗಳನ್ನು ಓದುವ ಮೂಲಕ ಸ್ವಂತ ಓದಿನಿಂದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಅತ್ಯುನ್ನತ ರ್ಯಾಂಕ್ ಪಡೆದಿರುವುದಕ್ಕೆ ಹೆಮ್ಮೆಯಿಂದ ಸನ್ಮಾನಿಸಲಾಗುತ್ತಿದೆ ಎಂದ ಜಿಲ್ಲಾಧಿಕಾರಿಯವರು ನಿಮ್ಮ ಸೇವಾ ಅವಧಿಯಲ್ಲಿ ಸಾಧನೆ ಮಾಡಿದವರಿಗೆ ಇದೇ ರೀತಿ ಸನ್ಮಾನಿಸಿ ಗೌರವಿಸುವ ಕೆಲಸ ಮಾಡಿದಲ್ಲಿ ಅವರು ಸಹ ನಿಮ್ಮಂತೆ ಶ್ರಮಪಟ್ಟು ಓದುವ ಮೂಲಕ ಉನ್ನತ ಸ್ಥಾನಕ್ಕೇರುವರು ಎಂದರು.
22 ವರ್ಷದ ಸೌಭಾಗ್ಯ ಬೀಳಗಿಮಠ ಇವರು ಪ್ರೌಢ ಶಿಕ್ಷಣವನ್ನು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ನಿವಾಸದ ಹತ್ತಿರವಿರುವ ಎಜು ಏಷಿಯಾ ಶಾಲೆಯಲ್ಲಿ ಮತ್ತು ಪಿಯುಸಿಯನ್ನು ಸಿದ್ದಗಂಗಾ ಶಾಲೆಯಲ್ಲಿ ಪೂರೈಸಿ ಧಾರವಾಡದಲ್ಲಿ ಕೃಷಿ ಪದವಿ ಪಡೆದಿರುತ್ತಾರೆ.
ಈ ವೇಳೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಸೌಭಾಗ್ಯ ಬೀಳಗಿಮಠ ಇವರ ತಂದೆ ಶರಣಯ್ಯಸ್ವಾಮಿ, ತಾಯಿ ಶರಣಮ್ಮ, ಸಹೋದರ, ಮಾರ್ಗದರ್ಶನ ಮಾಡಿದ ಪ್ರೊಫೆಸರ್ ಡಾ; ಅಶ್ವಿನಿ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಅವರು ಉಪಸ್ಥಿತರಿದ್ದರು.