
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಭದ್ರಾವತಿ ತಾಲ್ಲೂಕಿನ ಮಾವಿನಕೆರೆ ಗ್ರಾಮದ ನಾಗರಾಜಪ್ಪ ಎಂಬುವವರು ಗಾಯಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಬೃಹತ್ ಎಲ್‌ಇಡಿ ಪರದೆಗಳ ಮೂಲಕ ಮೆರವಣಿಗೆ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕ್ಯಾಂಟರ್ ಲಾರಿಗಳಲ್ಲಿ ಈ ಎಲ್‌ಇಡಿ ಪರದೆಗಳನ್ನು ಇರಿಸಲಾಗಿತ್ತು. ಗಾಂಧಿ ಬಜಾರ್‌ನಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಎಲ್‌ಇಡಿ ಪರದೆ ಕೆಳಗೆ ಬಿದ್ದಿದೆ. ಈ ವೇಳೆ ವಾಹನದ ಪಕ್ಕದಲ್ಲಿ ನಡೆದು ಸಾಗುತ್ತಿದ್ದ ಕೆಲವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದ ಬಳಿಕ ಸಚಿವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್ ಇದ್ದರು.