ಸಮಾಜ ಸೇವೆ ಮಾಡಬೇಕೆಂದರೆ, ಬಡವರಿಗೆ ಸಹಾಯ ಮಾಡಬೇಕೆಂದರೆ ಅಧಿಕಾರವಿರಲೇಬೇಕೆಂದಿಲ್ಲ. ಸಹಾಯ ಮಾಡುವ ಮನಸ್ಸಿದ್ದರೆ ಹಲವು ರೀತಿಯಲ್ಲಿ ನೆರವು ನೀಡಬಹುದು ಎಂಬುದಕ್ಕೆ ಇಲ್ಲಿದೆ ನಿದರ್ಶನ.
ಇಲ್ಲೋರ್ವ ವ್ಯಕ್ತಿ ತಮ್ಮ ಪುಟ್ಟ ಮಗನೊಂದಿಗೆ ಬಂದು ರಣಬಿಸಿಲಲ್ಲಿ ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾಸ್ಥರಿಗೆ ಮಾಡುತ್ತಿರುವ ಸಹಾಯ ಅನುಕರಣಿಯವಾಗಿದೆ. ಹುಟ್ಟುಹಬ್ಬದಂತಹ ಸಂದರ್ಭಗಳಲ್ಲಿ ಜನರು ಅದ್ದೂರಿಯಾಗಿ ಆಚರಣೆ ಮಾಡುವುದು, ಭರ್ಜರಿ ಪಾರ್ಟಿ, ಕೇಕ್ ಕತ್ತರಿಸಿ ಮಜಾ ಮಾಡಿ ದುಂದು ವೆಚ್ಚ ಮಾಡುವವರೇ ಹೆಚ್ಚಿನ ಜನರು ಕಾಣಸಿಗುವಾಗ ಮೈಸೂರಿನ ಲಯನ್ ಡಾ. ವಿಶ್ವನಾಥ್ ಎಂಬವರು ಜನ್ಮದಿನದಂದು ಬೀದಿ ಬದಿ ವ್ಯಾಪಾರಸ್ಥರಿಗೆ ನೆರವಾಗುತ್ತಿರುವ ರೀತಿ ಎಲ್ಲರಿಗೂ ಮಾದರಿ. ಇವರ ಸಮಾಜಸೇವೆ ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಮಾಜ ಸೇವೆಯಿಂದಲೇ ಹೆಸರಾಗಿರುವ ಲಯನ್ ಡಾ. ವಿಶ್ವನಾಥ್ ಅವರಿಗೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ಬಂದಿವೆ. ಹುಟ್ಟುಹಬ್ಬದ ಆಚರಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಲಯನ್ ಡಾ. ವಿಶ್ವನಾಥ್, ಈ ದಿನ ಕಿರಿಯ ಪುತ್ರ ಜೀವನ್ ಹಾಗೂ ನನ್ನ ಹುಟ್ಟುಹಬ್ಬ. ನಿಮ್ಮೆಲ್ಲರ ಹಾರೈಕೆ ಆಶೀರ್ವಾದ ನಮ್ಮಿಬ್ಬರ ಮೇಲೆ ಸದಾ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಬೀದಿಬದಿ ವ್ಯಾಪಾರ ಮಾಡುತ್ತಿರುವವರು, ಬಡ ಜನರು, ಭಿಕ್ಷುಕರ ಬಳಿ ಸ್ವತಃ ಲಯನ್ ಡಾ. ವಿಶ್ವನಾಥ್ ಹಾಗೂ ಅವರ ಮಗ ತೆರಳಿ ಬಿಸಿಲಿನಲ್ಲಿ ಕುಳಿತಿರುವ ಅವರಿಗೆ ಕೊಡೆ, ಉಡುಗೊರೆ ನೀಡಿ ಮಾನವೀಯತೆ ಮೆರೆದಿದ್ದಾರೆ.