ನವದೆಹಲಿ: ದೇಶದ ರಕ್ಷಣಾ ಪಡೆ ಬಲವನ್ನು ಮತ್ತಷ್ಟು ವೃದ್ಧಿಗೊಳಿಸುವ ಉದ್ದೇಶದಿಂದ 67 ಸಾವಿರ ಕೋಟಿ ರೂ. ಮೊತ್ತದ 97 ಲಘು ಯುದ್ಧ ವಿಮಾನಗಳ ನಿರ್ಮಾಣ ಮತ್ತು ಖರೀದಿಗೆ ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಕೇಂದ್ರ ರಕ್ಷಣಾ ಸಚಿವಾಲಯ ಟೆಂಡರ್ ನೀಡಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿ LCA MK -1A ಯುದ್ಧ ವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿದೆ.
2021ರಲ್ಲಿ 48000 ಕೋಟಿ ರೂ. ಮೊತ್ತದಲ್ಲಿ 84 ಯುದ್ಧವಿಮಾನ ಖರೀದಿಗೆ ಮಂಡಳಿ ಒಪ್ಪಿಗೆ ನೀಡಿತ್ತು. ಮತ್ತೆ 97 ಫೈಟರ್ ಜೆಟ್ ಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೆಚ್ಎಎಲ್ ನಲ್ಲಿ ಒಂದು ತೇಜಸ್ ಯುದ್ಧ ವಿಮಾನ ಸಿದ್ಧವಾಗಿದ್ದು, ಪ್ರಾಯೋಗಿಕ ಹಾರಾಟ ನಡೆಸಿದೆ. 2028ರ ವೇಳೆಗೆ ಉಳಿದ 83 ಯುದ್ಧ ವಿಮಾನಗಳನ್ನು ವಾಯುಪಡೆಗೆ ಹಸ್ತಾಂತರಿಸಲಾಗುವುದು.
ವಾಯುಪಡೆಗೆ ಯುದ್ಧ ವಿಮಾನಗಳ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ ಚುರುಕುಗೊಳಿಸಲು ಮಹಾರಾಷ್ಟ್ರದ ನಾಸಿಕ್ ನಲ್ಲಿ ಹೆಚ್ಎಎಲ್ ಹೊಸ ಉತ್ಪಾದನಾ ಘಟಕ ಆರಂಭಿಸಿದ್ದು, ವಾರ್ಷಿಕ 24 ಫೈಟರ್ ಜೆಟ್ ಗಳನ್ನು ನಿರ್ಮಾಣ ಮಾಡಲಾಗುವುದು. LCA MK-1 ಯುದ್ಧ ವಿಮಾನದ ಸುಧಾರಿತ ಮಾದರಿಯಾದ ಮಂಡಳಿ LCA MK -1A ಯುದ್ಧ ವಿಮಾನ ವಾಯುಪಡೆಗೆ ಹೊಸ ಶಕ್ತಿಯಾಗಲಿದೆ ಎಂದು ಹೇಳಲಾಗಿದೆ.