ಬೆಂಗಳೂರು: 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಫಲಿತಾಂಶದಲ್ಲಿ ಲೋಪ ಎಸಗಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ.
ಸುಪ್ರೀಂಕೋರ್ಟ್ ನಿಂದ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷಾ ಫಲಿತಾಂಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ನೀಡಿದ್ದರೂ, ಮಂಡಳಿ ಮಾತ್ರ ಫಲಿತಾಂಶದಲ್ಲಿ ಆದ ಲೋಪ ಸರಿಪಡಿಸಲು ಕ್ರಮ ಕೈಗೊಂಡಿದೆ.
ಲೋಪ ದೋಷಗಳ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಸಲು ಮತ್ತು ಸರಿಯಾಗಿ ಮೌಲ್ಯಮಾಪನ ಮಾಡದ ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡು ಏ. 15 ರೊಳಗೆ ವರದಿ ಸಲ್ಲಿಸಲು ಮಂಡಳಿಯ ಅಧ್ಯಕ್ಷರು ಸೂಚನೆ ನೀಡಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಯ ಮೌಲ್ಯಮಾಪನದಲ್ಲಿ ಲೋಪ ದೋಷಗಳು ಕಂಡು ಹೊಂದಿವೆ ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಆರೋಪಿಸಿತ್ತು.
ಸರಿ ಉತ್ತರ ಬರೆದಿದ್ದರೂ ಸರಿಯಾದ ಅಂಕ ನೀಡಿಲ್ಲ. ಉತ್ತಮವಾಗಿ ಓದುವ ಮಕ್ಕಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ನೀಡಲಾಗಿದೆ. ಫಲಿತಾಂಶದ ಅಂಕಿ ಅಂಶಗಳ ಲೆಕ್ಕವನ್ನು ತಪ್ಪಾಗಿ ಮಾಡಲಾಗಿದೆ. ಕೆಲವು ವಿಷಯಗಳಲ್ಲಿ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿರುವ ಪ್ರಕರಣಗಳು ನಡೆದಿವೆ ಎನ್ನಲಾಗಿತ್ತು.