ಸೈಬರ್ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ತೊಡಗಿರುವ ರಾಜ್ಯ ಪೊಲೀಸ್ ಇಲಾಖೆಗೆ ನೆರವಾಗುವ ಸಲುವಾಗಿ ಇನ್ಫೋಸಿಸ್ ಫೌಂಡೇಶನ್ 33 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಿದೆ.
ಈ ನಿಟ್ಟಿನಲ್ಲಿ ಬೆಂಗಳೂರಿನ ಸಿಐಡಿ ಘಟಕ, ಭಾರತೀಯ ದತ್ತಾಂಶ ಭದ್ರತಾ ಸಮಿತಿ ಹಾಗೂ ಸೈಬರ್ ಅಪರಾಧಗಳ ತನಿಖೆ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಜೊತೆಗೆ ಇನ್ಫೋಸಿಸ್ ಫೌಂಡೇಶನ್ ಒಡಂಬಡಿಕೆ ಮಾಡಿಕೊಂಡಿದೆ.
ಸೈಬರ್ ಅಪರಾಧಗಳ ತನಿಖಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ಈ ನೆರವು ನೀಡಲಾಗಿದ್ದು, ಡಿಜಿಟಲ್ ಫೋರೆನ್ಸಿಕ್ ಹಾಗೂ ಸೈಬರ್ ಅಪರಾಧಗಳ ತನಿಖೆ ಕುರಿತ ತರಬೇತಿ ಮತ್ತು ಸಂಶೋಧನೆಗೆ ಇದರಿಂದ ಅನುಕೂಲವಾಗಲಿದೆ.