ಬೆಂಗಳೂರು: ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ಬಳಿಯ ತೋಟದ ಮನೆಯಲ್ಲಿ ಕಾರ್ಯಕರ್ತರಿಗೆ ಭೋಜನ ಕೂಟ ಆಯೋಜನೆ ಮಾಡಿ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ. ಚುನಾವಣಣಾ ಅಕ್ರಮ ನಡೆಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕುಮಾರಸ್ವಾಮಿ ಅಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರೆ ಅದಕ್ಕೆ ಅನುಮತಿ ಪಡೆಯಬೇಕು. ಅವರು ಅಲ್ಲಿ ಪ್ರಚಾರ ನಡೆಸುತ್ತಿಲ್ಲ. ಮನೆಗೆ ಊಟಕ್ಕೆ ಹೋಗಿದ್ದಾರೆ. ಯುಗಾದಿ ಹಬ್ಬಕ್ಕೆ ಊಟಕ್ಕೆಂದು ಮನೆಗೆ ಹೋಗಲು ಪರ್ಮಿಷನ್ ತೆಗೆದುಕೊಳ್ಳಬೇಕಾ? ಹಾಗಂತ ಯಾವ ಕಾನೂನಿನಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಕಾವಲು ಕಾಯುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಸಭೆ ನಡೆಸಿದ್ದಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಹಾಗಾಗಿ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.