ಬೆಂಗಳೂರು: ಸಾಗರೋತ್ತರ ಭಾರತೀಯ ಪ್ರಜೆ(OCI) ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳನ್ನು ಭಾರತೀಯ ಪೌರತ್ವ ಹೊಂದಿರುವ ವಿದ್ಯಾರ್ಥಿಗಳಿಗೆ ಸರಿ ಸಮಾನವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
OCI ವಿದ್ಯಾರ್ಥಿಗಳಿಗೂ ಈ ಬಾರಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಸಿಇಟಿ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ನ್ಯಾ. ಅನು ಸಿವರಾಮನ್, ನ್ಯಾ. ಎ.ಆರ್. ಹೆಗಡೆ ಅವರಿದ್ದ ವಿಭಾಗೀಯ ಪೀಠದಲ್ಲಿ ಅಭಿದ್ಯು ಗೌಡ ಮಂಡ್ಯ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದೆ. ಸರ್ಕಾರಿ ವಕೀಲರ ಹೇಳಿಕೆಯ ಬಳಿಕ ಹೈಕೋರ್ಟ್ ಆದೇಶ ಹೊರಡಿಸಿದೆ.
OCI ಕಾರ್ಡ್ ಹೊಂದಿರುವವರ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಈ ಹಿಂದೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಆಧರಿಸಿ ಹೈಕೋರ್ಟ್ ನಿಂದ ಈ ಆದೇಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಬದ್ಧವಾಗಿ ಮತ್ತು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆದುಕೊಳ್ಳಬೇಕು. ಸುಪ್ರೀಂ ಕೋರ್ಟ್ 2018 ರ ಮಾರ್ಚ್ 4ಕ್ಕೆ ಮುನ್ನ ಒಸಿಐ ಕಾರ್ಡ್ ಪಡೆದಿರುವವರನ್ನು ಭಾರತೀಯ ಪ್ರಜೆಗಳೆಂದೇ ಪರಿಗಣಿಸಬೇಕು ಎಂದು ಆದೇಶಿಸಿದೆ.
ಅರ್ಜಿದಾರರು ಇಂಗ್ಲೆಂಡ್ ನಲ್ಲಿ ಜನಿಸಿದ್ದು, ಒಸಿಐ ಕಾರ್ಡ್ ಹೊಂದಿದ್ದಾರೆ. ಅವರು ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಮಂಡ್ಯದಲ್ಲಿ 10ನೇ ತರಗತಿ ಪೂರ್ಣಗೊಳಿಸಿ, ಬೆಂಗಳೂರಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಾರೆ. ತನಗೆ ಸಿಇಟಿ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕೌನ್ಸೆಲಿಂಗ್ ಗೆ ಅವಕಾಶ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.