ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಆದರೆ ಈ ಮೈತ್ರಿ ಕೇವಲ ಚುನಾವಣೆಗಷ್ಟೇ ಸೀಮಿತವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದ ಬಿ.ವೈ.ವಿಜಯೇಂದ್ರ ಈ ವಿಷಯ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭಾ ಚುನಾವಣೆಗಷ್ಟೇ ಸೀಮಿತವಲ್ಲ. ಶಾಶ್ವತವಾಗಿರುತ್ತದೆ ಎಂದಿದ್ದಾರೆ.
ರೈತ ವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ನ್ನು ದೇಶದಿಂದ ಕಿತ್ತೊಗೆಯಬೇಕು. ಆ ನಿಟ್ಟಿನಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಮ್ಮೆಲ್ಲರ ಹಿರಿಯರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಆಶಿರ್ವಾದ ಮಾಡಿರಲಿಲ್ಲ. ಈ ಬಾರಿ ದೇವೇಗೌಡರ ಆಶಿರ್ವಾದ ನಮ್ಮ ಮೇಲಿದೆ ಎಂದರು.
ಪ್ರಧಾನಿ ಮೋದಿಗಾಗಿ ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ. ಖುದ್ದು ಅವರೇ ಭೇಟಿಯಾಗಿ ಮಾತನಾಡಿದ್ದರು. ಮೈತ್ರಿ ಲೋಕಸಭಾ ಚುನವಾಣೆ ಬಳಿಕವೂ ಮುಂದುವರೆಯಲಿದೆ ಎಂದು ಹೇಳಿದರು.