ಬೆಂಗಳೂರು: ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುವಂತೆ ರಜೆ ದಿನವೂ ಬೆಸ್ಕಾಂ ಸೇವೆ ಒದಗಿಸಲಿದೆ.
ಮಾರ್ಚ್ 29ರಂದು ಗುಡ್ ಫ್ರೈಡೇ ಮತ್ತು ಮಾರ್ಚ್ 31 ರಂದು ಭಾನುವಾರ ಸರ್ಕಾರಿ ರಜೆ ದಿನಗಳಲ್ಲಿಯೂ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳ ಕ್ಯಾಶ್ ಕೌಂಟರ್ ಗಳಲ್ಲಿ ಸೇವೆ ನೀಡಲಾಗುತ್ತದೆ.
ಇಂಧನ ಇಲಾಖೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಉನ್ನತೀಕರಣ ಉದ್ದೇಶದಿಂದ ಮಾರ್ಚ್ 10 ರಿಂದ 19 ರವರೆಗೆ 10 ದಿನಗಳ ಕಾಲ ಬೆಸ್ಕಾಂ ವ್ಯಾಪ್ತಿಯಲ್ಲಿ ಆನ್ಲೈನ್ ಸೇವೆ ಸ್ಥಗಿತಗೊಳಿಸಲಾಗಿತ್ತು. ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿ ಎಲ್ಲ ಆನ್ಲೈನ್ ಸೇವೆಗಳು ಲಭ್ಯ ಇರಲಿಲ್ಲ. ಈ ಅವಧಿಯಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿರಲಿಲ್ಲ. ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಉನ್ನತೀಕರಣ ಬಳಿಕ ಆನ್ಲೈನ್ ಸೇವೆಗಳು ಪುನರಾರಂಭಗೊಂಡಿದೆ. ಆದರೂ ಹೆಚ್ಚಿನ ಕಾರ್ಯ ಒತ್ತಡ ಕಾರಣ ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡು ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಗ್ರಾಹಕರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಗ್ರಾಹಕರ ಅನುಕೂಲಕ್ಕಾಗಿ ಸರ್ಕಾರಿ ರಜೆ ದಿನಗಳಾದ ಮಾರ್ಚ್ 29 ಮತ್ತು 31 ರಂದು ಎಲ್ಲಾ ಉಪ ವಿಭಾಗಗಳ ಕ್ಯಾಶ್ ಕೌಂಟರ್ ಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಲಾಗಿದೆ.