ನಮ್ಮ ಶಾಸಕರಿಗೆ ಎಎಪಿ ತೊರೆಯಲು ಬಿಜೆಪಿ 20-25 ಕೋಟಿ ರೂ. ಆಫರ್ ನೀಡಿದೆ ಎಂದು ಜಲಾಲಾಬಾದ್ ಶಾಸಕ ಗೋಲ್ಡಿ ಕಾಂಬೋಜ್ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿ ಸಿಎಂ ಕೇಜ್ರಿವಾಲ್ ಅವರ ಬಂಧನದ ನಡುವೆ 2024 ರ ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಪಂಜಾಬ್‌ನಲ್ಲಿ ರಾಜಕೀಯ ಕದನವನ್ನು ಹೆಚ್ಚಿಸುವ ಹೇಳಿಕೆ ಇದಾಗಿದೆ. ಜಲಾಲಾಬಾದ್ ನ ಎಎಪಿ ಶಾಸಕ ಗೋಲ್ಡಿ ಕಾಂಬೋಜ್ ಪಕ್ಷದ ಇಬ್ಬರು ನಾಯಕರೊಂದಿಗೆ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
ಮೂವರೂ ಎಎಪಿ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಗೆ ಸಂಬಂಧಿಸಿದ ಜನರಿಂದ ಕರೆಗಳನ್ನು ಸ್ವೀಕರಿಸಿದ್ದಾರೆ ಮತ್ತು ತಮ್ಮ ನಿಷ್ಠೆಯನ್ನು ಬದಲಾಯಿಸಲು ಕೋಟಿಗಟ್ಟಲೇ ಹಣದ ಆಫರ್ ಮಾಡಿದ್ದಾರೆ ಎಂದು ಆರೋಪಿಸಿದರು.
ನಾಯಕರು ತಮಗೆ ಬಂದ ಕರೆಗಳನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಸಂಖ್ಯೆ ಸೈಪ್ರಸ್‌ನಿಂದ ಬಂದಿದೆ ಎಂದು ಶಾಸಕರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ‘ಚುನಾವಣೆಯಲ್ಲಿ ಗೆಲ್ಲದೇ ಬಿಜೆಪಿ ಬಹುಮತ ಗಳಿಸಲು ಯತ್ನಿಸುತ್ತಿದೆ’ ಎಂಬುದಕ್ಕೆ ಈ ಕರೆಗಳು ಉದಾಹರಣೆ ಎಂದು ಶಾಸಕರು ಹೇಳಿದ್ದಾರೆ.