ನವದೆಹಲಿ: ಗೆಲುವಿಗೆ ಕಾರ್ಯತಂತ್ರ ರೂಪಿಸಿ ಚಾಣಾಕ್ಷ ರಾಜಕೀಯ ನಡೆ ಅನುಸರಿಸುತ್ತಿರುವ ಬಿಜೆಪಿ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ರೇಖಾ ಪಾತ್ರಾ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ರಾಜ್ಯದ ಸಂದೇಶಖಾಲಿ ಪ್ರದೇಶದಲ್ಲಿ ಹಿಂಸಾಚಾರದಿಂದ ಬದುಕುಳಿದ ಮಹಿಳೆಯರಲ್ಲಿ ಪಾತ್ರಾ ಒಬ್ಬರು. ಪಾತ್ರಾ ಅವರು ಸಂದೇಶಖಾಲಿ ಘಟನೆಯಲ್ಲಿ ಮೊಟ್ಟಮೊದಲ ಬಾರಿಗೆ ಪ್ರಕರಣ ದಾಖಲಿಸಿದ್ದರು.
ಬಸಿರ್ಹತ್ನಿಂದ ತನ್ನ ಉಮೇದುವಾರಿಕೆ ಕುರಿತು, ಪಾತ್ರಾ ಅವರು ಪ್ರತಿಕ್ರಿಯೆ ನೀಡಿ, ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುತ್ತೇನೆ ಲೋಕಸಭೆ ಚುನಾವಣೆಗೆ ಬಸಿರ್ಹತ್ನಿಂದ ಸ್ಪರ್ಧಿಸಿ ಸಂದೇಶಖಾಲಿ ಸಂತ್ರಸ್ತರಿಗಾಗಿ ಧ್ವನಿ ಎತ್ತುತ್ತೇನೆ ಎಂದು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರನ್ನು ಬಸಿರ್ಹತ್ ಲೋಕಸಭಾ ಸ್ಥಾನದ ಉಮೇದುವಾರಿಕೆಯಿಂದ ಹಿಂದೆಗೆದುಕೊಳ್ಳಲು ನಿರ್ಧರಿಸಿದೆ. ಬದಲಾಗಿ ಅವರ ಸ್ಥಾನಕ್ಕೆ ನೂರುಲ್ ಇಸ್ಲಾಂ ಅವರನ್ನು ಕಣಕ್ಕಿಳಿಸಲು ಪಕ್ಷ ಸೂಚಿಸಿದೆ.
ರೇಖಾ ಪಾತ್ರ ಯಾರು?
ಸಂದೇಶಖಾಲಿಯ ಪ್ರಕ್ಷುಬ್ಧ ಪ್ರದೇಶದ ಪತ್ರಪಾರಾದಲ್ಲಿ ನೆಲೆಸಿರುವ ಗೃಹಿಣಿ ರೇಖಾ ಪಾತ್ರಾ ಅವರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದರು. ಅವರು ಸಂದೇಶಖಾಲಿಯಲ್ಲಿ ಆಪಾದಿತ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳನ್ನು ಮುನ್ನಡೆಸುವ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದಾಗ ಆಕೆಯ ಹೆಸರು ರಾಷ್ಟ್ರೀಯ ಗಮನ ಸೆಳೆಯಿತು.
ಸಂದೇಶಖಾಲಿಯ ಮಹಿಳೆಯರ ಧ್ವನಿಯನ್ನು ಮೊದಲು ಎತ್ತಿದವರು ಆಕೆ. ಆಕೆ ನೀಡಿದ ದೂರಿನ ನಂತರ ಮೂವರು ಆರೋಪಿಗಳಾದ ಟಿಎಂಸಿ ಶಾಸಕ ಶೇಖ್ ಷಹಜಹಾನ್, ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಜೈಲು ಸೇರಿದ್ದಾರೆ.
ಮಾರ್ಚ್ 6 ರಂದು ಬರಾಸತ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಂದೇಶಖಾಲಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿದ್ದರು.