ಪುತ್ತೂರು: ರಾಜ್ಯದಲ್ಲಿ ಪಕ್ಷ ಶುದ್ಧೀಕರಣ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಪ್ರಧಾನಿ ಮೋದಿ ಪರಿಕಲ್ಪನೆಯ ಸಂಘಟನೆ ಇದೆ. ಸ್ವಾರ್ಥ ರಹಿತ ರಾಜಕಾರಣ ಮುಂದುವರೆಸಿಕೊಂಡು ಹೋಗಬೇಕು. ಪ್ರಧಾನಿ ಮೋದಿ ಹೇಳಿದಂತೆ ಪರಿವಾರದಿಂದ ಮುಕ್ತರಾಗಬೇಕು. ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತರಾಗಿ ರಾಜನೀತಿ ಪಾಲಿಸಬೇಕು. ಈ ಚುನಾವಣೆಯಲ್ಲಿಯೇ ಅದು ಆಗಬೇಕಿತ್ತು. ಆದರೆ, ರಾಜ್ಯದಲ್ಲಿ ಜವಾಬ್ದಾರಿ ಹೊತ್ತವರು ಈ ಮೂರರಿಂದ ಹೊರತಾಗಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಪ್ರಾಮಾಣಿಕತೆ ಶಬ್ದಕ್ಕೆ ಅರ್ಥ ಇಲ್ಲವಾಗಿದೆ. ಇದು ಮನಸ್ಸಿಗೆ ನೋವು ಉಂಟು ಮಾಡುವ ಸಂಗತಿಯಾಗಿದೆ. ಚುನಾವಣೆವರೆಗೂ ನೋವನ್ನು ನುಂಗಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಡಿವಿಎಸ್ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದಿಂದ ನನಗೆ 30 ವರ್ಷಗಳ ಕಾಲ ಸುಧೀರ್ಘ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಈಗ ಚುನಾವಣಾ ರಾಜಕಾರಣದಿಂದ ದೂರ ಉಳಿದು ಪಕ್ಷದೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತೇನೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ, ಆ ಪಕ್ಷಕ್ಕೆ ನಾನು ಏನಾದರೂ ಕೊಡಬೇಕಿದೆ. ನಾನು ಎಂದಿಗೂ ಗುಂಪುಗಾರಿಕೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ.