ಬೆಂಗಳೂರು: ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ಬೇಕಾಗಿರುವ ಇಲಾಖಾವಾರು ಪ್ರಸ್ತಾವನೆಗಳನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿಗೆ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ.
ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್ 16ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಇಲಾಖೆಗಳು ಜಾಗ್ರತೆ ವಹಿಸಬೇಕು. ವಿನಾಯಿತಿ ಬೇಕಾದ ಪ್ರಸ್ತಾವನೆಗಳಿಗೆ ಕೇಂದ್ರ ಚುನಾವಣಾ ಆಯೋಗದ ಅನುಮೋದನೆ ಕೋರಲು ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದೆ. ಅಂತಹ ತುರ್ತು ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಇಲಾಖೆಗಳು ಪರಿಶೀಲನಾ ಸಮಿತಿಗೆ ಕಳುಹಿಸಬೇಕು. ಇಲಾಖೆಗಳಡಿ ಬರುವ ನಿಗಮ, ಮಂಡಳಿ, ನಿರ್ದೇಶನಾಲಯಗಳು ತಮ್ಮ ಇಲಾಖೆಗಳಿಗೆ ಪ್ರಸ್ತಾಪನೆ ಸಲ್ಲಿಸಬೇಕು. ಇಲಾಖೆಗಳು ಅವುಗಳನ್ನು ಪರಿಶೀಲಿಸಿ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಇಲಾಖೆಯ ಪ್ರಮುಖ ನಿರ್ಧಾರ, ಹೊಸ ಯೋಜನೆ ಕೈಗೊಳ್ಳಲು ಅವಕಾಶ ಇರುವುದಿಲ್ಲ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರಸ್ತೆ ದುರಸ್ತಿ ಸೇರಿ ತುರ್ತು ಅವಶ್ಯಕತೆಗಳನ್ನು ಚುನಾವಣಾ ಆಯೋಗದ ಅನುಮತಿ ಪಡೆದುಕೊಂಡು ಕೈಗೊಳ್ಳಲು ಅವಕಾಶವಿದೆ ಎಂದು ಹೇಳಲಾಗಿದೆ.