ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕುಟುಂಬದ ಮಹಿಳೆಯರಿಗೆ 3000 ರೂ. ಜಮಾ ಮಾಡಲಾಗುತ್ತದೆ ಎನ್ನುವ ವದಂತಿ ಹರಡಿದ್ದು, ಹುಬ್ಬಳ್ಳಿಯಲ್ಲಿ ಪೋಸ್ಟ್ ಆಫೀಸ್ ಗಳಿಗೆ ಮಹಿಳೆಯರು ಮುಗಿಬಿದ್ದಿದ್ದಾರೆ.
ಹುಬ್ಬಳ್ಳಿಯ ಅಂಚೆ ಇಲಾಖೆ ಕಚೇರಿಗಳು ಕಳೆದ 3-4 ದಿನಗಳಿಂದ ಜನರಿಂದ ತುಂಬಿ ತುಳುಕುತ್ತಿವೆ. ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆಯಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರ ಖಾತೆಗೆ ಮೂರು ಸಾವಿರ ರೂಪಾಯಿ ಜಮಾ ಮಾಡಲಾಗುತ್ತದೆ ಎಂದು ವದಂತಿ ಹರಡಿದೆ. ಮೋದಿ ಕಾರ್ಡ್ ಮತ್ತು ಮೋದಿ ಗ್ಯಾರಂಟಿ ಯೋಜನೆಗಳು ಅಂಚೆ ಕಚೇರಿಯಲ್ಲಿ ಇಲ್ಲ ಎಂದು ಅಂಚೆ ಇಲಾಖೆಯ ಸಿಬ್ಬಂದಿ ತಿಳಿ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಮಹಿಳೆಯರು ಇಲ್ಲ.
ಉಳಿತಾಯ ಖಾತೆ ತೆರೆಯಲೇಬೇಕು ಎಂದು ಸಾವಿರಾರು ಮಹಿಳೆಯರು ಪೋಸ್ಟ್ ಆಫೀಸ್ ಗಳಿಗೆ ಮುಗಿಬಿದ್ದಿದ್ದಾರೆ. ಮೋದಿ ಕಾರ್ಡ್ ಮಾಡಿಸಿದವರಿಗೆ ಮಾತ್ರ 3000 ರೂ. ಹಾಕುತ್ತಾರೆ. ಅಕ್ಕಪಕ್ಕದ ನಿವಾಸಿಗಳು ಕೂಡ ಈ ಕಾರ್ಡ್ ಮಾಡಿಸಿಕೊಂಡಿದ್ದು, ಶನಿವಾರದೊಳಗೆ ಕಾರ್ಡ್ ಮಾಡಿಸಿದವರಿಗೆ ಮಾತ್ರ ಹಣ ಹಾಕುತ್ತಾರೆ ಎಂದು ಮಹಿಳೆಯರು ಬೆಳಿಗ್ಗೆಯಿಂದಲೇ ಅಂಚೆ ಕಚೇರಿಗೆ ಬಂದು ಕಾಯುತ್ತಾರೆ.
ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಚೇರಿ, ಹಳೆ ಹುಬ್ಬಳ್ಳಿ, ಉಪ ಅಂಚೆ ಕಚೇರಿ ಸೇರಿ ವಿವಿಧ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. ಕಿಡಿಗೇಡಿಗಳು ಈ ರೀತಿ ವದಂತಿ ಹಬ್ಬಿಸಿದ್ದರಿಂದ ಅಂಚೆ ಕಚೇರಿ ಸಿಬ್ಬಂದಿ ಹೈರಾಣಾಗಿದ್ದಾರೆ. ಸುಳ್ಳು ಸುದ್ದಿ ನಂಬಬೇಡಿ ಎಂದರೂ ಮಹಿಳೆಯರು ಕೇಳುತ್ತಿಲ್ಲ ಎಂದು ಹೇಳಲಾಗಿದೆ.