ಬೆಂಗಳೂರು: ಕೊರೋನಾ ಸೋಂಕಿತರ ಪತ್ತೆ ಕಾರ್ಯದ ವೇಳೆ ಪಾದರಾಯನಪುರದಲ್ಲಿ ಬಿಬಿಎಂಪಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ 375 ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
2020ರ ಏಪ್ರಿಲ್ 19 ರಂದು ಕೊರೋನಾ ಸೋಂಕಿತರ ಪತ್ತೆ ಕಾರ್ಯ ಕೈಗೊಂಡಿದ್ದ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಲ್ಲದೇ, ಟೇಬಲ್, ಕುರ್ಚಿ, ಬೆಂಚ್ ಕಿತ್ತೆಸೆದು ದಾಂದಲೆ ನಡೆಸಿದ ಆರೋಪದ ಮೇಲೆ ನವಾಜ್ ಪಾಷಾ ಸೇರಿದಂತೆ 375 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಐಪಿಸಿ ಸೆಕ್ಷನ್ 188ರ ಅಡಿ ಪ್ರಕರಣ ದಾಖಲಾಗಿದ್ದು, ಸಕ್ರಮ ಪ್ರಾಧಿಕಾರಿ ಖಾಸಗಿ ದೂರು ದಾಖಲಿಸದ ಹಿನ್ನೆಲೆ ನ್ಯಾಯಮೂರ್ತಿ ಕೆ. ನಟರಾಜನ್ ತಾಂತ್ರಿಕ ಕಾರಣಗಳಿಂದ ಪ್ರಕರಣಗಳ ರದ್ದುಪಡಿಸಿ ಆದೇಶಿಸಿದ್ದಾರೆ.