ಚಿತ್ರದುರ್ಗ: ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಚಿತ್ರದುರ್ಗದ ಆದರ್ಶ ನಗರದಲ್ಲಿರುವ ಪತಿ ಮನೆ ಎದುರು ಪತ್ನಿ ಧರಣಿ ಕುಳಿತಿದ್ದು, ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಪತಿ ವಿಕಾಸ್ ಮನೆ ಎದುರು ಪತ್ನಿ ತೇಜಸ್ವಿನಿ ಧರಣಿ ನಡೆಸಿದ್ದಾರೆ. ಎರಡು ವರ್ಷದ ಹಿಂದೆ ಮಲೆಬೆನ್ನೂರಿನ ಉದ್ಯಮಿ ವೀರಭದ್ರಯ್ಯ ಪುತ್ರಿ ತೇಜಸ್ವಿನಿ, ಚಿತ್ರದುರ್ಗದ ಉದ್ಯಮಿ ವಿಜಯಕುಮಾರ್ ಪುತ್ರ ವಿಕಾಸ್ ಅವರ ಮದುವೆ ನೆರವೇರಿತ್ತು. ಮದುವೆಯಾಗಿ ಆರು ತಿಂಗಳ ನಂತರ ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ತೇಜಸ್ವಿನಿ ಕುಟುಂಬದವರು 50 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು. ಮತ್ತೆ ಹಣ ಕೊಡುವಂತೆ ವಿಕಾಸ್ ಮನೆಯವರು ಡಿಮ್ಯಾಂಡ್ ಮಾಡಿದ್ದಾರೆ. ಎರಡು ದಿನದ ಹಿಂದೆ 50 ಲಕ್ಷ ರೂಪಾಯಿ ತಂದು ಕೊಟ್ಟರೂ ಕಿರುಕುಳ ನೀಡುತ್ತಿದ್ದಾರೆ. ಗರ್ಭಿಣಿ ಆಗಿದ್ದಾಗ ಹೆಣ್ಣು ಮಗು ಎಂದು ತಿಳಿದು ಗರ್ಭಪಾತ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪತಿ ವಿಕಾಸ್ ಕುಟುಂಬದವರ ವಿರುದ್ಧ ತೇಜಸ್ವಿನಿ ಗಂಭೀರ ಆರೋಪ ಮಾಡಿದ್ದು, ಮನೆಯೊಳಗೆ ಬಿಟ್ಟುಕೊಳ್ಳದೆ ಪತಿ ಕುಟುಂಬದವರು ಬೀಗ ಹಾಕಿಕೊಂಡಿದ್ದಾರೆ. ಎಷ್ಟೇ ಕೂಗಿ ಕರೆದರೂ ಪತಿ ಮನೆಯವರು ಬಾಗಿಲು ತೆರೆದಿಲ್ಲ. ಇದರಿಂದಾಗಿ ಮನೆಯ ಮುಂದೆ ಧರಣಿ ನಡೆಸಿದ್ದಾರೆ.
ಶಾಸಕ ವೀರೇಂದ್ರ ಭೇಟಿ
ಧರಣಿ ನಿರತ ಸ್ಥಳಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಭೇಟಿ ನೀಡಿದ್ದು, ಶಾಸಕರು ಬಂದರೂ ವಿಕಾಸ್ ಬಾಗಿಲು ತೆರೆದಿಲ್ಲ. ಆಗ ಶಾಸಕರು, ಎರಡೂ ಕುಟುಂಬದವರು ಮಾತುಕತೆ ನಡೆಸುವುದಾದರೆ ಬನ್ನಿ. ಕಾನೂನು ಹೋರಾಟ ಮಾಡುವುದರಲ್ಲಿ ನಿಮ್ಮ ನಿರ್ಧಾರ ಎಂದು ಹೇಳಿದ್ದಾರೆ.
ತೇಜಸ್ವಿನಿ ದೂರು
ಪತಿ ವಿಕಾಸ್, ಅತ್ತೆ, ಮಾವನ ವಿರುದ್ಧ ತೇಜಸ್ವಿನಿ ಚಿತ್ರದುರ್ಗ ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಚಿತ್ರದುರ್ಗದ ಆದರ್ಶ ನಗರದಲ್ಲಿರುವ ಪತಿ ಮನೆ ಮುಂದೆ ತೇಜಸ್ವಿನಿ ಧರಣಿ ನಡೆಸಿದ್ದು, ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಆಗಮಿಸಿದ್ದ ಪೊಲೀಸರು ಬಾಗಿಲು ತೆರೆದು ವಿಕಾಸ್ ಮತ್ತು ಕುಟುಂಬದವರು ಪರಾರಿಯಾಗಲು ನೆರವು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪತ್ನಿ ತೇಜಸ್ವಿನಿ ಮೇಲೆ ವಿಕಾಸ್ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆಂದು ಆರೋಪಿಸಲಾಗಿದೆ. ವಿಕಾಸ್ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದಾರೆ. ನಿನ್ನೆ ರಾತ್ರಿ ನೂಕಾಟ ತಳ್ಳಾಟದ ವೇಳೆ ತೇಜಸ್ವಿನಿ ಕಾಲಿಗೆ ಗಾಯವಾಗಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ತೇಜಸ್ವಿನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತೇಜಸ್ವಿನಿ ರಕ್ಷಣೆಗೆ ಬರುವ ಬದಲು ಪೊಲೀಸರು ವಿಕಾಸ್ ಪರವಾಗಿ ನಿಂತಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.