ಬೆಂಗಳೂರು: ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ರಾಜ್ಯದ ಹಲವು ಕಡೆ ಮಳೆಯಾಗಿದೆ. ಸಿಡಿಲಿಗೆ ಕುರಿಗಾಹಿ ಬಲಿಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ, ಕಿಷ್ಟಪುರ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಶಾಂತಕುಮಾರ(30) ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಿಷ್ಟಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಘಟನೆ ನಡೆದಿದ್ದು, ಕಿಷ್ಟಪುರ ಗ್ರಾಮದ ಕುರಿಗಾಹಿ ಶಾಂತಕುಮಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ಮಳೆಯಾಗಿದೆ. ಭಾರಿ ಬಿಸಿಲಿನ ವಾತಾವರಣದ ನಡುವೆ ಮಳೆಯಾಗಿದ್ದು ಕೊಡಗಿನ ಕುಂಜಿಲಗೇರಿ, ಬೊಳ್ಳುಮಾಡು, ದುಬಾರೆ, ಸಿದ್ದಾಪುರ, ಒಂಟಿಯಂಗಡಿ, ಚೆಯ್ಯಂಡಾಣೆ ಮೊದಲಾದ ಕಡೆ ಉತ್ತಮ ಮಳೆಯಾಗಿದ್ದು, ಜನರಿಗೆ ಸಂತಸ ತಂದಿದೆ. ಕಾಫಿ ಫಸಲಿಗೆ ಹೂವು ಅರಳಲು ಈ ವೇಳೆ ಮಳೆ ಅಗತ್ಯವಾಗಿತ್ತು. ಮಾ. 20ರಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.