ನವದೆಹಲಿ: ಅಹಮದಾಬಾದ್ ವಿಶ್ವವಿದ್ಯಾನಿಲಯದಲ್ಲಿ ಇಬ್ಬರು ವಿದೇಶಿ ವಿದ್ಯಾರ್ಥಿಗಳ ಗಾಯಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಗುಜರಾತ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ.
ಹಿಂಸಾಚಾರದಲ್ಲಿ ಗಾಯಗೊಂಡ ಇಬ್ಬರು ವಿದೇಶಿ ವಿದ್ಯಾರ್ಥಿಗಳಲ್ಲಿ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಅಹಮದಾಬಾದ್ ನ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ನಿನ್ನೆ ಹಿಂಸಾಚಾರದ ಘಟನೆ ನಡೆದಿದೆ. ರಾಜ್ಯ ಸರ್ಕಾರವು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಘರ್ಷಣೆಯಲ್ಲಿ ಇಬ್ಬರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರನ್ನು ವೈದ್ಯಕೀಯ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದುರು ಹೇಳಿದ್ದಾರೆ.
ಅಹಮದಾಬಾದ್ ಪೊಲೀಸ್ ಕಮಿಷನರ್ ಜಿಎಸ್ ಮಲಿಕ್ ಪ್ರಕಾರ, ಶನಿವಾರ ರಾತ್ರಿ ಸುಮಾರು 20-25 ಜನರು ಅಹಮದಾಬಾದ್ನ ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಆವರಣಕ್ಕೆ ಪ್ರವೇಶಿಸಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ನಮಾಜ್ ಮಾಡುವುದಕ್ಕೆ ಆಕ್ಷೇಪಿಸಿ ಜಗಳವಾಡಿದರು, ಅವರ ಮೇಲೆ ಹಲ್ಲೆ ನಡೆಸಿದರು ಮತ್ತು ಕಲ್ಲು ತೂರಿದರು ಎಂದು ತಿಳಿಸಿದ್ದಾರೆ.
ಶ್ರೀಲಂಕಾದ ಒಬ್ಬರು ಮತ್ತು ತಜಕಿಸ್ತಾನದ ಇನ್ನೊಬ್ಬ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 20-25 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಒಂಬತ್ತು ತಂಡಗಳನ್ನು ರಚಿಸಲಾಗಿದೆ ಎಂದು ಮಲಿಕ್ ಹೇಳಿದರು.
ಅಫ್ಘಾನಿಸ್ತಾನ, ತಜಕಿಸ್ತಾನ್, ಶ್ರೀಲಂಕಾ ಮತ್ತು ಆಫ್ರಿಕಾದ ದೇಶಗಳು ಸೇರಿದಂತೆ ವಿಶ್ವವಿದ್ಯಾನಿಲಯದಲ್ಲಿ ಸುಮಾರು 300 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಆಗಮಿಸಿದ್ದಾರೆ.