ಬೆಂಗಳೂರು: ಪೋಕ್ಸೊ ಕಾಯ್ದೆಯಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಬಿ. ಪ್ರಭಾಕರ ಶಾಸ್ತ್ರಿ ಮತ್ತು ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗಿಯ ಪೀಠದಲ್ಲಿ ನಡೆದು ಈ ಆದೇಶ ನೀಡಲಾಗಿದೆ. ಅಲ್ಲದೆ, ಅಪ್ರಾಪ್ತೆಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದೆ ಎಂಬುದನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿರುವುದು ದೋಷಪೂರಿತವಾಗಿದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ, 25,000ರೂ. ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ 20 ಸಾವಿರ ರೂ. ಸಂತ್ರಸ್ತೆಗೆ ನೀಡುವಂತೆ ನ್ಯಾಯಪೀಠ ಆದೇಶ ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯಲ್ಲಿ ಸಂತ್ರಸ್ತೆ ಅಪ್ರಾಪ್ತೆ ಎಂಬುದು ಗೊತ್ತಾಗಲಿದೆ. ಆದರೆ, ಮದುವೆಯಾಗುವುದಾಗಿ ಆರೋಪಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತೆ ಘಟನೆ ನಡೆದ ತಕ್ಷಣ ದೂರು ನೀಡಿರಲಿಲ್ಲ. ಆದ ಕಾರಣ ಆರೋಪಿಯನ್ನು ಖುಲಾಸೆಗೊಳಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
15 ವರ್ಷದ ಮಗಳನ್ನು ಆರೋಪಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದು ಆಕೆ ಗರ್ಭಿಣಿಯಾಗಿದ್ದಾಳೆ. ಈಗ ಮದುವೆಯಾಗಲು ಆರೋಪಿ ಮುಂದಾಗುತ್ತಿಲ್ಲ ಎಂದು 2016ರ ಏಪ್ರಿಲ್ 3ರಂದು ಸಂತ್ರಸ್ತೆಯ ಪೋಷಕರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ವಿಚಾರಣೆ ನಡೆಸಿದ ದಾವಣಗೆರೆ ವಿಶೇಷ ನ್ಯಾಯಾಲಯ 2017ರ ಅಕ್ಟೋಬರ್ 13ರಂದು ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ ಪ್ರಾಪ್ತರಾಗಿದ್ದು ಒಪ್ಪಿದ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ಆರೋಪಿಯನ್ನು ಖುಲಾಸೆಗೊಳಿಸಿದ್ದು, ಇದನ್ನು ಪ್ರಶ್ನಿಸಿ ಹೊನ್ನಾಳಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿದೆ.