ಬೆಂಗಳೂರು: ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಹೆದ್ದಾರಿ ಬಳಕೆ ಮಾಡಿದಷ್ಟೇ ಟೋಲ್ ಶುಲ್ಕ ನೀಡುವ ಎಕ್ಸಿಟ್ ಮತ್ತು ಎಂಟ್ರಿ ಟೋಲ್ಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಶೀಘ್ರವೇ ಈ ಕಾಮಗಾರಿ ಆರಂಭವಾಗಲಿದೆ. ಪ್ರಸ್ತುತ ಎಕ್ಸ್ ಪ್ರೆಸ್ ವೇ ನಲ್ಲಿ ಓಪನ್ ಟೋಲ್ ಮಾದರಿಯಲ್ಲಿ ಹೆದ್ದಾರಿ ಸುಂಕ ಸಂಗ್ರಹಿಸಲಾಗುತ್ತಿದೆ. ಇದರಿಂದ ಒಂದು ಕಿಲೋಮೀಟರ್ ಹೆದ್ದಾರಿ ಬಳಕೆ ಮಾಡಿದರೂ ಪೂರ್ಣ ಬಳಕೆಯ ಶುಲ್ಕ ಪಾವತಿಸಬೇಕಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹೆದ್ದಾರಿಯ ಪ್ರಮುಖ ನಗರಗಳಿಗೆ ವ್ಯವಸ್ಥಿತ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಇಲ್ಲದ ಸಮಸ್ಯೆ ಸರಿಪಡಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1,200 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಯೋಜನೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ವೇ ಹಾದು ಹೋಗುವ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಬಳಿ ಎಕ್ಸಿಟ್ ಮತ್ತು ಎಂಟ್ರಿ ದ್ವಾರ ನಿರ್ಮಾಣ ಮಾಡಲಾಗುವುದು ಎನ್ನಲಾಗಿದೆ.