ನವದೆಹಲಿ: ಒಟ್ಟಿಗೆ ಹಲವು ಸಿಡಿತಲೆಗಳನ್ನು ಹೊತ್ತೊಯ್ದು ಏಕಕಾಲಕ್ಕೆ 10 ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ ಅಗ್ನಿ -5 ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ.
ಪಾಕಿಸ್ತಾನ, ಚೀನಾ ಸೇರಿದಂತೆ ಐದರಿಂದ ಆರು ಸಾವಿರ ಕಿಲೋಮೀಟರ್ ವ್ಯಾಪ್ತಿಯ ಏಷ್ಯಾ ಖಂಡದ ಬಹುತೇಕ ಭಾಗಗಳನ್ನು ತಲುಪವ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಇಂತಹ ತಂತ್ರಜ್ಞಾನ ಹೊಂದಿದ ಆರನೇ ದೇಶ ಭಾರತ ಆಗಿದೆ.
ಈ ದಿವ್ಯಾಸ್ತ್ರದಿಂದ ಒಂದೇ ಕ್ಷಿಪಣಿಗೆ ಹಲವಾರು ಅಣ್ವಸ್ತ್ರ ಸಿಡಿತಲೆ ಅಳವಡಿಸಿ ಉಡಾಯಿಸಬಹುದಾಗಿದೆ. 10 ಸಿಡಿತಲೆಗಳಿಗೆ ಒಂದೊಂದು ಗುರಿ ಪಡಿಸಿ ಏಕಕಾಲಕ್ಕೆ ದಾಳಿ ನಡೆಸಬಹುದು. ಒಂದೇ ಕ್ಷಿಪಣಿಯಿಂದ ಶತ್ರು ಪಡೆಗಳ ಹಲವು ತಾಣಗಳನ್ನು ನಾಶ ಮಾಡಬಹುದು.
ಪ್ರಧಾನಿ ಮೋದಿ ಅವರು ಈ ಬಗ್ಗೆ ಐತಿಹಾಸಿಕ ಘೋಷಣೆ ಮಾಡಿ ಅಗ್ನಿ-5 ಕ್ಷಿಪಣಿಯ ಹಾರಾಟದ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್(ಎಂಐಆರ್‌ವಿ) ತಂತ್ರಜ್ಞಾನವನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯ ಯಶಸ್ವಿ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. ಮಿಷನ್ ದಿವ್ಯಾಸ್ತ್ರ ಪರೀಕ್ಷೆಯೊಂದಿಗೆ ಭಾರತವು MIRV ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರಿದೆ. ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿತಲೆಗಳನ್ನು ನಿಯೋಜಿಸುವುದನ್ನು ಇದು ಖಚಿತಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಸಾಮರ್ಥ್ಯವು ಭಾರತದ ಬೆಳೆಯುತ್ತಿರುವ ತಾಂತ್ರಿಕ ಪರಾಕ್ರಮವನ್ನು ನಿರೂಪಿಸುತ್ತದೆ. 5000 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5 ಅನ್ನು ದೇಶದ ದೀರ್ಘಾವಧಿಯ ಭದ್ರತಾ ಅಗತ್ಯಗಳನ್ನು ಪರಿಗಣಿಸಿ ಅಭಿವೃದ್ಧಿಪಡಿಸಲಾಗಿದೆ. ಅಗ್ನಿ 1 ರಿಂದ 4 ಕ್ಷಿಪಣಿಗಳು 700 ಕಿ.ಮೀ ನಿಂದ 3,500 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಈಗಾಗಲೇ ನಿಯೋಜಿಸಲಾಗಿದೆ.
ಭೂಮಿಯ ವಾತಾವರಣದ ಮಿತಿಗಳ ಒಳಗೆ ಮತ್ತು ಹೊರಗೆ ಪ್ರತಿಕೂಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವ ಸಾಮರ್ಥ್ಯಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ.