ಬೆಂಗಳೂರು: ಸಂವಿಧಾನ ಬದಲಾವಣೆ ಬಗ್ಗೆ ಹೇಳಿಕೆ ನೀಡಿರುವ ಸಂಸದ ಅನಂತ್ ಕುಮಾರ್ ಅವರ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ, ಅದು ಹೆಗಡೆ ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಸ್ಪಷ್ಟ ಪಡಿಸಿದೆ. ಇದೇ ವೇಳೆ ವಿಪಕ್ಷ ನಾಯಕ ಆರ್ ಅಶೋಕ್ ಕೂಡ ಭಾರತದ ಸಂವಿಧಾನದ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ನೀಡಿರುವ ಹೇಳಿಕೆಗೂ ಭಾರತೀಯ ಜನತಾ ಪಕ್ಷದ ಅಧಿಕೃತ ನಿಲುವಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನ ಎಂದರೆ ಕೇವಲ ಒಂದು ಗ್ರಂಥವಲ್ಲ. ಸಂವಿಧಾನ ಅಂದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬಲಿದಾನಗೈದ ಅಸಂಖ್ಯಾತ ಮಹನೀಯರ ತ್ಯಾಗದ ದ್ಯೋತಕ, ಆಶಯಗಳ ಪ್ರತೀಕ ಎಂದು ತಿಳಿಸಿದ್ದಾರೆ.
ಸಂವಿಧಾನಕ್ಕೆ ಅಪಚಾರ ಮಾಡುವ ಅಥವಾ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸವನ್ನ ಬಿಜೆಪಿ ಈ ಹಿಂದೆಯೂ ಮಾಡಿಲ್ಲ, ಮುಂದೆಂದಿಗೂ ಮಾಡುವುದೂ ಇಲ್ಲ. ಅಷ್ಟೇ ಅಲ್ಲ ಅಂತಹ ಮಾತು ಆಡುವುದನ್ನು ಸಹಿಸುವುದೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.