ಇಸ್ಲಾಮಾಬಾದ್: ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಜರ್ದಾರಿ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಯ ಸಹ-ಅಧ್ಯಕ್ಷರಾಗಿದ್ದಾರೆ, ಇದು ಇತ್ತೀಚೆಗೆ ರಾಷ್ಟ್ರೀಯ ಸರ್ಕಾರವನ್ನು ರಚಿಸಲು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್(ಪಿಎಂಎಲ್) ಜೊತೆ ಒಪ್ಪಂದ ಮಾಡಿಕೊಂಡಿದೆ.
68 ವರ್ಷದ ಜರ್ದಾರಿ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಜಂಟಿ ಅಭ್ಯರ್ಥಿಯಾಗಿದ್ದು, ಅವರ ಪ್ರತಿಸ್ಪರ್ಧಿ ಮಹಮೂದ್ ಖಾನ್ ಅಚಕ್ಜಾಯ್(75) ಸುನ್ನಿ ಇತ್ತೆಹಾದ್ ಕೌನ್ಸಿಲ್(ಎಸ್‌ಐಸಿ) ಅಭ್ಯರ್ಥಿಯಾಗಿದ್ದರು.
ಅವರು 255 ಮತಗಳನ್ನು ಪಡೆದರೆ, ಅವರ ಎದುರಾಳಿ 119 ಮತಗಳನ್ನು ಪಡೆದರು ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ. ಪಾಕಿಸ್ತಾನಿ ಸಂವಿಧಾನದ ನಿಬಂಧನೆಯ ಪ್ರಕಾರ, ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರ ಚುನಾವಣಾ ಕಾಲೇಜು ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳು ಜರ್ದಾರಿಯನ್ನು ಚುನಾಯಿಸಿದವು.
ಉದ್ಯಮಿ-ರಾಜಕಾರಣಿಯಾಗಿರುವ ಜರ್ದಾರಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ. 2008 ರಿಂದ 2013 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜರ್ದಾರಿ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ನಾಗರಿಕರಾಗಿದ್ದಾರೆ.