ಹಾವೇರಿ: ಹಾವೇರಿ-ಗದಗ ಲೋಕಸಭೆ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಪಟ್ಟು ಹಿಡಿದಿದ್ದಾರೆ. ನಾವು ತ್ಯಾಗ ಮಾಡಿ ಬಂದವರು, ಈಗ ಮನೆಯಲ್ಲಿದ್ದೇವೆ. ನಮಗೆ ಹೆದರಿಸುವುದು, ಬೆದರಿಸುವುದು ಎಲ್ಲ ಗೊತ್ತಿಲ್ಲ. ಟಿಕೆಟ್ ನನಗೆ ಕೊಡಬೇಕು ಎಂದು ಬಿ.ಸಿ.ಪಾಟೀಲ್ ಡಿಮ್ಯಾಂಡ್ ಮಾಡಿದ್ದಾರೆ.
ಹಿರೇಕೇರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್, ಸೈಲೆಂಟ್ ಆಗಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ.ಈಗಾಗಲೇ ಬಸವರಾಜ್ ಬೊಮ್ಮಾಯಿ ಸಿಎಮ್ ಆಗಿದ್ದಾರೆ. ನಾನು ಹಾವೇರಿ-ಗದಗ ಜಿಲ್ಲೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ ಹಾಗಾಗಿ ನನಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ನಾನು ಟಿಕೆಟ್ ಬೆನ್ನುಹತ್ತಿಕೊಂಡು ಹೋಗುವುದಿಲ್ಲ. ನನಗೆ ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದೇನೆ. ನನಗೆ ಟಿಕೆಟ್ ಸಿಗಲಿಲ್ಲವೆಂದರೆ, ಕಾಂತೇಶ್ ಗೆ ಟಿಕೆಟ್ ಕೊಟ್ಟರೆ ಯೋಚನೆ ಮಾಡುತ್ತೇನೆ. ಆನೆ ನಡೆದಿದ್ದೇ ಹಾದಿ ಅನ್ನುವಂತೆ ನನಗೆ ನಂದೇ ಹಾದಿ. ನಾನು ಎಚ್ಚರಿಕೆ ಕೊಡ್ತಿಲ್ಲ, ಡಿಮ್ಯಾಂಡ್ ಮಾಡುತ್ತಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.