ಹಾವೇರಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಎದುರಿಸುತ್ತಿರುವ ಬ್ಯಾಡಗಿ ಮೆಣಸಿನಕಾಯಿ ವರ್ತಕ ಮಹಮ್ಮದ್ ಶಫಿ ನಾಶಿಪುಡಿ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶ ಬರುವವರೆಗೆ ನಾಶಿಪುಡಿ ಅವರನ್ನು ಉಚ್ಚಾಟನೆ ಮಾಡುವ ಬಗ್ಗೆ ವರ್ತಕರ ಸಂಘ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದ್ದಾರೆ.
ವರ್ತಕರ ಸಂಘದ ಸಭಾಭವನದಲ್ಲಿ ಗುರುವಾರ ನಡೆದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಮಾರುಕಟ್ಟೆ ವರ್ತಕ ಈ ರೀತಿ ಹೇಳಿಕೆ ನೀಡಿರುವುದು ನಮಗೆ ನೋವುಂಟು ಮಾಡಿದೆ. ಇದನ್ನು ವರ್ತಕರ ಸಂಘ ಸಹಿಸುವುದಿಲ್ಲ. ಘಟನೆ ನಡೆದ ದಿನದಿಂದ ನಾಶಿಪುಡಿ ಕುಟುಂಬಕ್ಕೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅವಕಾಶ ನೀಡಿಲ್ಲ. ನ್ಯಾಯಾಲಯದ ತೀರ್ಪು ಬರುವವರೆಗೂ ಇದು ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ನಾಶಿಪುಡಿ ಅವರು ತಪ್ಪಿತಸ್ಥ ಎಂದು ತೀರ್ಪು ಬಂದಲ್ಲಿ ಅವರ ಲೈಸೆನ್ಸ್ ಮತ್ತು ಸಂಘದಿಂದ ಉಚ್ಚಾಟನೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಕೋರ್ಟ್ ಆದೇಶದವರೆಗೂ ಉಚ್ಚಾಟನೆ ಮಾಡುವುದಿಲ್ಲ ಎಂದು ಹೇಳಲಾಗಿದೆ.