ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಡಾ.ಸಿ.ಎನ್. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕ್ಷೇತ್ರ ಹಂಚಿಕೆ ಜೊತೆಗೆ ಬಿಜೆಪಿಯಿಂದ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧಿಸಲಿ ಎನ್ನುವ ಸಲಹೆ ಇದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಶಿವರಾತ್ರಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಮುನಿರತ್ನ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಂಜುನಾಥ್ ಕೂಡ ಭಾಗವಹಿಸಲಿದ್ದಾರೆ. ಇದರೊಂದಿಗೆ ಲೋಕಸಭೆ ಚುನಾವಣೆ ಪ್ರಚಾರವೂ ಆರಂಭವಾಗಲಿದೆ ಎಂದು ಹೇಳಲಾಗಿದೆ.