ಬೆಂಗಳೂರು: ರಾಜ್ಯದಲ್ಲಿ 40,000 ಕೃಷಿ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಇಂಧನ ಸಚಿವ ಕೆ.ಜೆ. ಚಾರ್ಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 2008 ರಿಂದ 2023ರ ಸೆಪ್ಟೆಂಬರ್ 22 ರವರೆಗೆ ನೋಂದಣಿಯಾಗಿರುವ 4 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳು ಇವೆ. ಇವುಗಳಲ್ಲಿ 40,000 ಕೃಷಿ ಪಂಪ್ ಸೆಟ್ ಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕುಸುಮ್ -ಬಿ ಯೋಜನೆಯಡಿ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
4 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳ ರೈತರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದು, ವಿದ್ಯುತ್ ಮಾರ್ಗ ಜಾಲದಿಂದ 500 ಮೀಟರ್ ಒಳಗಿದ್ದರೆ ಫೀಡರ್ ನಿಂದ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಕಲ್ಪಿಸಲಾಗುತ್ತದೆ. 500 ಮೀಟರ್ ಗಿಂತ ದೂರ ಇರುವ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡುವ ಕಾರಣಕ್ಕೆ ಕುಸುಮ್ ಬಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್ ಅಳವಡಿಸಲು ಕೇಂದ್ರ ಸರ್ಕಾರ ಕುಸುಮ್ -ಬಿ ಯೋಜನೆಯಡಿ ಶೇಕಡ 30ರಷ್ಟು ಸಹಾಯಧನ ನೀಡಲಿದ್ದು, ರಾಜ್ಯ ಸರ್ಕಾರದ ಸಹಾಯಧನವನ್ನು ಶೇಕಡ 50ಕ್ಕೆ ಹೆಚ್ಚಳ ಮಾಡಲಾಗಿದೆ. ಬಾಕಿ ಶೇಕಡ 20ರಷ್ಟು ರೈತರು ಭರಿಸಬೇಕಿದೆ. ಈ ಯೋಜನೆಯಡಿ ರೈತರಿಗೆ ಪಂಪ್, ಮೋಟಾರ್, ಪೈಪ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.