ಬೆಳಗಾವಿ : ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದ ಹಾಲಿ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ. ಕೃಷ್ಣ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸ್ವಲ್ಪವೂ ಸಹಕಾರ ನೀಡಲಿಲ್ಲ. ಬೆಳಗಾವಿಯಲ್ಲಿ ಗೆದ್ದಿರುವ ಇಬ್ಬರು ಸಂಸದರು ಸೇರಿ ಬಿಜೆಪಿಯ ಒಬ್ಬೇ ಒಬ್ಬ ಸಂಸದ ಪಾರ್ಲಿಮೆಂಟಲ್ಲಿ ದ್ವನಿ ಎತ್ತಲಿಲ್ಲ. ಇದು ಬೆಳಗಾವಿ ಜನತೆಗೆ, ರಾಜ್ಯದ ಜನತೆಗೆ ಬಿಜೆಪಿ ಸಂಸದರು ಬಗೆದ ದ್ರೋಹ ಅಲ್ಲವೇ?ಎಂದು ಹೇಳಿದ್ದಾರೆ.
ನೀರಾವರಿ ಯೋಜನೆಗಳ ಬಗ್ಗೆಯೂ ಈ ಸಂಸದರು ಬಾಯಿಯನ್ನೇ ಬಿಡಲಿಲ್ಲ, ರಾಜ್ಯಕ್ಕೆ ಆರ್ಥಿಕವಾಗಿ ವಂಚಿಸುತ್ತಿರುವ ಬಗ್ಗೆಯೂ ತುಟಿ ಬಿಡದ ಈ ಸಂಸದರಿಗೆ ನೀವು ಕೊಟ್ಟ ಓಟಿಗೆ ಏನು ಗೌರವ ಬಂತು ಹೇಳಿ. ಬಿಜೆಪಿ ಇವತ್ತಿನವರೆಗೂ ನುಡಿದಂತೆ ನಡೆದ ಒಂದೇ ಒಂದು ಉದಾಹರಣೆ ಇದೆಯಾ ನೀವೇ ವಿಚಾರ ಮಾಡಿ ಎಂದಿದ್ದಾರೆ.