ನವದೆಹಲಿ: ನೌಕರರ ರಾಜ್ಯ ವಿಮಾ ನಿಗಮ(ESIC) ರಾಜ್ಯದಲ್ಲಿ ಮೂರು ಹೊಸ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಲಿದೆ.
ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಕಾರ್ಯದರ್ಶಿ ಸುಮಿತಾ ದಾವ್ರಾ ಅಧ್ಯಕ್ಷತೆಯಲ್ಲಿ ಮಾರ್ಚ್ 5ರಂದು ದೆಹಲಿಯಲ್ಲಿ ನಡೆದ 231ನೇ ESIC ಸ್ಥಾಯಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಬೆಂಗಳೂರು ಹೊರವಲಯದ ಹಾರೋಹಳ್ಳಿ, ನರಸಾಪುರ, ಬೊಮ್ಮಸಂದ್ರದಲ್ಲಿ ಹೊಸ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು.
ಕರ್ನಾಟಕದ ಮೂರು ಇಎಸ್ಐ ಆಸ್ಪತ್ರೆಗಳು ಸೇರಿ ದೇಶದಲ್ಲಿ ಒಟ್ಟು 7 ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಿದ್ದು, ಇದಕ್ಕಾಗಿ 11,28,21 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಉತ್ತರ ಪ್ರದೇಶದ ಮೀರತ್, ಬರೇಲಿ, ಮಧ್ಯಪ್ರದೇಶದ ಪೀತಾಂಪುರ, ಒಡಿಶಾದ ದುಬುರಿಯಲ್ಲಿ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು.
ಈ ಇಎಸ್ಐ ಆಸ್ಪತ್ರೆಗಳ ನಿರ್ಮಾಣದಿಂದ ESIC ಈಗಿನ ವೈದ್ಯಕೀಯ ಚಿಕಿತ್ಸಾ ಮೂಲಸೌಕರ್ಯಕ್ಕೆ ಹೆಚ್ಚುವರಿಯಾಗಿ 800 ಹಾಸಿಗೆಗಳು ಸೇರ್ಪಡೆಯಾದಂತಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.