ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಪ್ರತಿಭಾ ಎಂ ನಾಯ್ಕ ಕೋಂ ಮಹೇಶ್ ನಾಯ್ಕ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇ-ಸ್ವತ್ತು ಮಾಡಿಸಲು ಲಂಚದ ಪಡೆದ ಸೊರಬ ಪುರಸಭೆ ಕಂದಾಯ ನಿರೀಕ್ಷಕ ವಿನಾಯಕ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮರವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿಭಾ ಎಂಬುವವರ ಹಳೇ ಸೊರಬ ಪುರಸಭೆ ವ್ಯಾಪ್ತಿಯಲ್ಲಿ ಇರುವ ಖಾಲಿ ನಿವೇಶನದ ಇ-ಸ್ವತ್ತು ಮಾಡಿಸಲು ಕಂದಾಯ ನಿರೀಕ್ಷಕ ವಿನಾಯಕರ ಅವರನ್ನು ಭೇಟಿ ಮಾಡಿ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿರುತ್ತಾರೆ. ಈ ಸಂದರ್ಭ ಕಂದಾಯ ನಿರೀಕ್ಷಕರು 40000 ರೂ. ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಅರ್ಜಿದಾರರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾರೆ. ಈ ದೂರಿನನ್ವಯ ಪೊಲೀಸ್ ನಿರೀಕ್ಷಕ ಪ್ರಕಾಶ್ ಅವರ ತಂಡವು ಈತನನ್ನು ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಹಿಡಿದು ಹಣವನ್ನು ಜಪ್ತಿ ಮಾಡಿ, ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿರುತ್ತಾರೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ನಡೆಸಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕರಾದ ಹೆಚ್.ಎಸ್. ಸುರೇಶ್, ಪೊಲೀಸ್ ಸಿಬ್ಬಂದಿಗಳಾದ ಮಹಂತೇಶ, ಸುರೇಂದ್ರ, ಯೋಗೀಶ್, ಬಿ.ಟಿ. ಚನ್ನೇಶ, ಪ್ರಶಾಂತ್‍ಕುಮಾರ್, ಅರುಣ್‍ಕುಮಾರ್, ದೇವರಾಜ, ರಘುನಾಯ್ಕ, ಕೆ.ಸಿ. ಜಯಂತ, ವಿ. ಗೋಪಿ, ಮತ್ತು ಪ್ರದೀಪ್ ಕುಮಾರ್, ಬಿ.ಕೆ. ಗಂಗಾಧರ ಭಾಗವಹಿಸಿದ್ದರು.