ಬೆಂಗಳೂರು : 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಆರಂಭವಾಗಿದ್ದು, ಹಾಗೆಯೇ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 25 ರಿಂದ ಆರಂಭವಾಗಿ ಏ. 06ರ ವರೆಗೆ ನಡೆಯಲಿವೆ.
SSLC ವಾರ್ಷಿಕ ಪರೀಕ್ಷೆಯ ಹಾಲ್ ಟಿಕೆಟ್ ನ್ನು ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ಡೌನ್ ಲೋಡ್ ಮಾಡಿಕೊಂಡು ಮಕ್ಕಳಿಗೆ ವಿತರಿಸಬಹುದಾಗಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2024ನೇ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ: 04.03.2024 ರಂದು ಮಂಡಳಿಯ ಜಾಲತಾಣದ ಶಾಲಾ ‘ಲಾಗಿನ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುವುದು.
ಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ, ಸದರಿ ವಿದ್ಯಾರ್ಥಿಯ ವಿವರವನ್ನು ಸಮರ್ಥನೆಯೊಂದಿಗೆ / ದಾಖಲೆಗಳೊಂದಿಗೆ ಕೂಡಲೇ ಮಂಡಲಿಗೆ ಕಳುಹಿಸಿಕೊಡುವುದು.
ಒಂದು ವೇಳೆ CCERF ವಿದ್ಯಾರ್ಥಿ CCEPF ಆಗಿದ್ದು, ಅಥವಾ CCEPF ವಿದ್ಯಾರ್ಥಿ CCERF ಆಗಿದ್ದು, ಹೀಗೆ ವಿದ್ಯಾರ್ಥಿಯ ವಿಧ ಬದಲಾಗಿದ್ದಲ್ಲಿ ಅಂತಹ ಪ್ರವೇಶ ಪತ್ರಗಳನ್ನು ಸೂಕ್ತ ದಾಖಲೆಗಳ ಸಮರ್ಥನೆಯೊಂದಿಗೆ ತಿದ್ದುಪಡಿಗಾಗಿ ಮಂಡಲಿಗೆ ಕಳುಹಿಸಿಕೊಡುವುದು.
ಉಲ್ಲೇಖಿತ-1ರ ಅಧಿಸೂಚನೆಯಲ್ಲಿ ವಿವರಿಸಿರುವಂತೆ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ/ವಿನಾಯಿತಿ ನೀಡುವ ಸಂಬಂಧ ಉಪನಿರ್ದೇಶಕರ ಜ್ಞಾಪನದನ್ವಯ ದೈಹಿಕ ಸ್ಥಿತಿ, ಭಾಷಾ ವಿನಾಯಿತಿ, ಬದಲಿ ವಿಷಯಗಳ ಮಾಹಿತಿಗಳು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಬಗ್ಗೆ ಮುಖ್ಯಶಿಕ್ಷಕರು ಖಚಿತಪಡಿಸಿಕೊಳ್ಳುವುದು. ಇಲ್ಲವಾದಲ್ಲಿ ಉಪನಿರ್ದೇಶಕರ [ಆಡಳಿತ]ರವರ ಜ್ಞಾಪನದ ಪ್ರತಿಯನ್ನು ದೃಢೀಕರಿಸಿ ಸಮರ್ಥನೆಯೊಂದಿಗೆ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ಕಳುಹಿಸಿ ವಿನಾಯಿತಿ ಪಡೆದುಕೊಳ್ಳುವುದು.
ವಿದ್ಯಾರ್ಥಿಯ ಭಾವಚಿತ್ರ, ಸಹಿ ಮತ್ತು ಇತರೆ ತಿದ್ದುಪಡಿಗಳಿದಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಂಡಲಿಗೆ ಸಲ್ಲಿಸಿ ಸರಿಪಡಿಸಿಕೊಳ್ಳುವುದು. ಒಂದು ವೇಳೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಇದರಿಂದ ವಿದ್ಯಾರ್ಥಿಗೆ ಮುಂದೆ ಅಂಕಪಟ್ಟಿಯಲ್ಲಾಗುವ ತೊಂದರೆಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಜವಾಬ್ದಾರರಾಗಿದ್ದು, ಮಂಡಲಿಯು ಇದರ ಜವಾಬ್ದಾರಿ ಹೊರುವುದಿಲ್ಲ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿದೆ.