ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮಾಸಿಕ ಮಿತಿ ವೇತನ 13,000 ದಿಂದ 15,000 ರೂಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಆಡಳಿತಾತ್ಮಕ ಅನುಕೂಲಕ್ಕಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ ಒಟ್ಟು 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತ ವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ. ನಂತರ, ಮೇಲೆ ಕ್ರಮ ಸಂಖ್ಯೆ: (4)ರಲ್ಲಿ ಓದಲಾಗಿರುವ ಸರ್ಕಾರಿ ಆದೇಶದಲ್ಲಿ ಸದರಿ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ಖಾಯಂ ಆಗಿ ಮುಂದುವರಿಸಲಾಗಿದೆ.
ಗ್ರಾಮ ಸಹಾಯಕರ ಮಾಸಿಕ ಮಿತವೇತನವನ್ನು ಕಾಲಕಾಲಕ್ಕೆ ಹೆಚ್ಚಳ ಮಾಡಲಾಗಿದ್ದು, ಮೇಲೆ (11)ರಲ್ಲಿ ಓದಲಾಗಿರುವ ಸರ್ಕಾರಿ ಆದೇಶದಲ್ಲಿ ಮಾಸಿಕ ಮಿತವೇತನವನ್ನು ದಿನಾಂಕ: 01.04.2022 ರಿಂದ ಅನ್ವಯಿಸುವಂತೆ ರೂ.12,000/-ಗಳಿಂದ ರೂ.13,000/-ಗಳಿಗೆ ಹೆಚ್ಚಿಸಲಾಗಿದೆ.
ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮಾಸಿಕ ಮಿತವೇತನವನ್ನು ದಿನಾಂಕ: 01.04.2024 ರಿಂದ ಅನ್ವಯವಾಗುವಂತೆ ಮಾಸಿಕ ರೂ. 13,000/-ಗಳಿಂದರೂ.15,000/- ಗಳಿಗೆ ಹೆಚ್ಚಿಸಲು ಸರ್ಕಾರವು ನಿರ್ಣಯಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9903 ಗ್ರಾಮ ಸಹಾಯಕರ ಮಾಸಿಕ ಮಿತವೇತನವನ್ನು ದಿನಾಂಕ: 01.04.2024 ರಿಂದ ಅನ್ವಯವಾಗುವಂತೆ ಮಾಸಿಕ ರೂ. 13,000/-ಗಳಿಂದ ರೂ.15,000/- (ಹದಿನೈದು ಸಾವಿರ ರೂಪಾಯಿಗಳು ಮಾತ್ರ) ಗಳಿಗೆ ಹೆಚ್ಚಿಸಿ ಆದೇಶಿಸಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂ: ಆಇ 58 ವೆಚ್ಚ-7/2024, ದಿನಾಂಕ:27/02/2024 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.