ಬೆಂಗಳೂರು: ಜಾತಿಗಣತಿ ವರದಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಂದೊಮ್ಮೆ ಸರಕಾರ ವರದಿ ಅಂಗೀಕರಿಸಿದಲ್ಲಿ ಎಲ್ಲಾ ಹರ, ಗುರು, ಚರ ಮೂರ್ತಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಹಾಸಭಾ ಕಾರ್ಯದರ್ಶಿ ಹೆಚ್.ಎಂ. ರೇಣುಕ ಪ್ರಸನ್ನ ಈ ಬಗ್ಗೆ ಹೇಳಿಕೆ ನೀಡಿದ್ದು, ಮೊದಲಿಗೆ ಜಾತಿ ಗಣತಿ ಸಮೀಕ್ಷೆ ಉದ್ದೇಶದಿಂದಲೇ ಕಾಂತರಾಜು ಆಯೋಗ ರಚಿಸಲಾಯಿತು. ನಂತರ ಇದನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿ ಬದಲಾಯಿಸಲಾಯಿತು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗ ನೀಡಿರುವ ವರದಿಯ ಬಗ್ಗೆ ಹಲವು ಅನುಮಾನಗಳಿವೆ. ವರದಿ ಸಿದ್ಧವಾಗಿ ಸುಮಾರು 8 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಇದು ಹಳೆಯ ವರದಿಯಾಗಿದ್ದು, ಅಂಗೀಕರಿಸಿದರೆ ಅನ್ಯಾಯವಾಗುತ್ತದೆ. ಹಾಗಾಗಿ ವರದಿ ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ. ಅಂಗೀಕರಿಸಿದಲ್ಲಿ ಸ್ವಾಮೀಜಿಗಳ ಜೊತೆಗೂಡಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.