ಬೆಂಗಳೂರು: ವಿಧಾನಮಂಡಲ ಅಧಿವೇಶನದ ಕೊನೆ ದಿನವಾದ ಇಂದು ಕೂಡ ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿನ ಆರೋಪ ಪ್ರತಿಧ್ವನಿಸಿದೆ. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸಿ ಜೈ ಶ್ರೀರಾಮ್ ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಜೈ ಜೈ ಸೀತಾರಾಮ್ ಎಂದು ಘೋಷಣೆ ಕೂಗಿ ಟಾಂಗ್ ನೀಡಿದ್ದಾರೆ.
ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಸರ್ಕಾರದ ಗ್ಯಾರಂಟಿ ಯೋಜನೆ ವಿಚಾರವಾಗಿ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ ವಿಚಾರವಾಗಿ ಗಲಾಟೆ ಮುಂದುವರೆಸಿದರು. ಆದರೂ ಸಿಎಂ ಸಿದ್ದರಾಮಯ್ಯ ತಮ್ಮ ಮಾತು ಮುಂದುವರೆಸುತ್ತಿದ್ದಂತೆ ಬಿಜೆಪಿ ಸದಸ್ಯರು ಸತತವಾಗಿ ಜೈ ಶ್ರೀರಾಮ್ ಘೋಷಣೆ ಕೂಗಲಾರಂಭಿಸಿದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಜೈ ಜೈ ಸೀತಾರಾಮ್ ಎಂದು ಘೋಷಣೆ ಕೂಗಿದರು. ಬಿಜೆಪಿ ನಾಯಕರಿಗೆ ತಲೆಯಲ್ಲಿ ಮೆದುಳಿಲ್ಲ. ತಲೆ ಖಾಲಿಯಾಗಿದೆ. ರಾಮಾಯಣ, ಮಹಾಭಾರತವನ್ನು ಇವರು ಓದಿಕೊಂಡಿಲ್ಲ. ಸುಮ್ಮನೇ ಗದ್ದಲ ಮಾಡುತ್ತಿದ್ದಾರೆ. ಶ್ರೀರಾಮನ ದೇವಸ್ಥಾನವನ್ನು ನಾನೂ ಕಟ್ಟಿಸಿದ್ದೇನೆ ಎಂದು ಗುಡುಗಿದರು.