ಬೆಂಗಳೂರು : ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವಿನ ಹಿನ್ನೆಲೆಯಲ್ಲಿ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಘಟನೆಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ಪಾಕ್ ಪರ ಘೋಷಣೆ ಕೂಗಿದ ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಮೂರು ತಂಡ ರಚಿಸಲಾಗಿದೆ. ಒಂದು ತಂಡ ತಾಂತ್ರಿಕ ಮಾಹಿತಿ ಅಧರಿಸಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಮತ್ತೊಂದು ತಂಡ ವಿಧಾನಸೌಧಕ್ಕೆ ನಾಸೀರ್‌ಹುಸೇನ್ ಜೊತೆಗೆ ಬಂದವರ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಇನ್ನೊಂದು ತಂಡ ಘಟನೆಯ ವಿಡಿಯೋ ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಹುಡುಕಾಡುತ್ತಿದೆ.
ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸಿರ್ ಹುಸೇನ್, ಆ ರೀತಿ ಘೋಷಣೆ ಕೂಗಿಲ್ಲ. ಒಂದು ವೇಳೆ ಕೂಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ನಾನು ಅಲ್ಲಿದ್ದ ವೇಳೆ ನನಗೆ ಕೇಳಿಸಿಲ್ಲ. ಆ ರೀತಿ ಘೋಷಣೆ ಕೂಗಿದ್ದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.