ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ವಿಪ್ ನಿಯಮ ಉಲ್ಲಂಘಿಸಿ ಅಡ್ಡಮತದಾನ ಮಾಡುವ ಮೂಲಕ ಕಾಂಗ್ರೆಸ್ ಗೆ ಮತ ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಅನರ್ಹಗೊಳಿಸುವ ಸಾಧ್ಯತೆ ಇದೆಯೇ ಎಂಬ ಕುತೂಹಲ ಮೂಡಿದೆ.
ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಡ್ಡಮತದಾನ ಮಾಡಿದರೂ ಕೂಡ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಈ ಮೂಲಕ ಅಡ್ಡಮತದಾನ ಮಾಡಿದರೂ ಸೇಫ್ ಆಗಲಿದ್ದಾರೆ.
ಕಾರಣ ರಾಜ್ಯಸಭಾ ಚುನಾವಣೆ ವಿಧಾನಸಭೆಯ ನಡಾವಳಿಯಲ್ಲ. ವಿಪ್ ಉಲ್ಲಂಘನೆ ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್, ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ.
ಪಕ್ಷ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು, ಪಕ್ಷದಿಂದ ಉಚ್ಛಾಟನೆ ಮಾಡಬಹುದು ಹೊರತು ಅನರ್ಹಗೊಳಿಸಲು ಸಾಧ್ಯವಿಲ್ಲ. ಹಾಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದರೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಎಸ್.ಟಿ.ಸೋಮಶೇಖರ್ ಗೆ ಸಮಸ್ಯೆಯಾಗುವುದಿಲ್ಲ ಎಂದು ತಿಳಿದುಬಂದಿದೆ.