ಬೆಂಗಳೂರು : ಜನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಮೆಟ್ರೋ 3 ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ ಒದಗಿಸಿದೆ. ಹೌದು, ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೋಮವಾರದಿಂದ ನೇರಳೆ ಮಾರ್ಗದಲ್ಲಿ ಪೀಕ್ ಅವರ್ನಲ್ಲಿ ಪ್ರತಿ ಮೂರು ನಿಮಿಷಕ್ಕೊಂದು ರೈಲು ಓಡಾಟ ಆರಂಭವಾಗಿದೆ.
ಹೆಚ್ಚು ಜನ ದಟ್ಟಣೆ ಇರುವ ಪೀಕ್ ಆವರ್ಗಳಲ್ಲಿ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ. ಮೆಜೆಸ್ಟಿಕ್ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಿದೆ. ಈ ಮಾರ್ಗದಲ್ಲಿ 8.45 ರಿಂದ 10.20 ರವರೆಗೆ ಇನ್ಮುಂದೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ.
ಬೈಯಪ್ಪನಹಳ್ಳಿಯಿಂದ ಕೆಆರ್ ಪುರಗೆ ಮೆಟ್ರೋ ಸಂಪರ್ಕವಾದ ಮೇಲೆ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೆಚ್ಚುವರಿ ರೈಲನ್ನು ಓಡಿಸಿ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಬಿಎಂಆರ್ ಸಿ ಎಲ್ ಈ ಕ್ರಮ ಕೈಗೊಂಡಿದೆ.
ನೇರಳೆ ಮಾರ್ಗದ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದಿಂದ ಗರುಡಾಚಾರ್ ಪಾಳ್ಯ ನಿಲ್ದಾಣದವರೆಗೆ ಬೆಳಗ್ಗೆ 8.45 ಗಂಟೆಯಿಂದ 10.20 ಪ್ರತಿ ಮೂರು ನಿಮಿಷಕ್ಕೆ ಒಂದು ರೈಲುಗಳು ಕಾರ್ಯಾಚರಣೆ ಆರಂಭಗೊಂಡಿದೆ. ನೇರಳೆ ಮಾರ್ಗದ ನಿಲ್ದಾಣಗಳಾದ ಟ್ರಿನಿಟಿ, ಎಂಜಿ ರಸ್ತೆ, ಇಂದಿರಾ ನಗರ, ಬೆನ್ನಿಗಾನಹಳ್ಳಿ, ಕೃಷ್ಣರಾಜ ಪುರ (ಕೆಆರ್ ಪುರ) ಹಾಗೂ ಗರುಡಾಚಾರ್ ಪಾಳ್ಯ ನಿಲ್ದಾಣದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರ ಅಗತ್ಯತೆ ನೋಡಿಕೊಂಡು ಹೆಚ್ಚುವರಿ ಮೆಟ್ರೋ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿದೆ.