ನವದೆಹಲಿ : ಜನವರಿ 31 ರಂದು ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಾದ ‘ವ್ಯಾಸ್ ತೆಖಾನಾ’ದಲ್ಲಿ ಹಿಂದೂ ಕಡೆಯವರು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು.
ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಈ ತೀರ್ಪು ನೀಡಿದ್ದಾರೆ.
ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ನಡುವೆ ಸುದೀರ್ಘ ಚರ್ಚೆಯ ನಂತರ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು.
ಜನವರಿ 31 ರಂದು ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಾದ ‘ವ್ಯಾಸ್ ತೆಖಾನಾ’ದಲ್ಲಿ ಹಿಂದೂ ಕಡೆಯವರು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಾಮನಿರ್ದೇಶನ ಮಾಡಿದ ‘ಪೂಜೆ’ ಮತ್ತು ‘ಪೂಜಾರಿ’ ಗೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನಿರ್ದೇಶನ ನೀಡಿತ್ತು.
ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿಯು ವಾರಣಾಸಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಫೆಬ್ರವರಿ 1 ರಂದು ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಮಸೀದಿ ಸಮಿತಿಯ ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ಸಂಭವಿಸಿದೆ.