ಬೆಂಗಳೂರು: ರಾಜ್ಯದಾದ್ಯಂತ ಉಪ ನೋಂದಣಾಧಿಕಾರಿ ಕಚೇರಿ ಕಾವೇರಿ 2.0 ತಂತ್ರಾಂಶದಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ದಸ್ತಾವೇಜು ನೋಂದಣಿಗೆ ಸಾರ್ವಜನಿಕರು ಪರದಾಟ ನಡೆಸುವಂತಾಗಿದೆ.
ಉಪ ನೋಂದಣಿ ಕಚೇರಿಯಲ್ಲಿನ ಸಾಫ್ಟ್ವೇರ್ ಕಾವೇರಿ 2.0 ಅಪ್ ಗ್ರೇಡ್ ಮಾಡಿದ ಬಳಿಕ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಹುತೇಕ ಸೇವೆಗಳನ್ನು ಆನ್ಲೈನ್ ಮಾಡಿದೆ. ಇದರಿಂದಾಗಿ ಕಾವೇರಿ ವೆಬ್ಸೈಟ್ ನಲ್ಲಿ ಸಾರ್ವಜನಿಕರು ಲಾಗಿನ್ ಆಗಿ ದಸ್ತಾವೇಜುಗಳ ನೋಂದಣಿ ಸೇವೆ ಪಡೆಯಬಹುದು. ಹಲವು ದಿನಗಳಿಂದ ಸರ್ವರ್ ಸಮಸ್ಯೆ ಎದುರಾಗಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನ ಪರದಾಡುವಂತಾಗಿದೆ.
ಕಾವೇರಿ ವೆಬ್ಸೈಟ್ ನಲ್ಲಿ ಲಾಗಿನ್ ಆಗಲು ಒಟಿಪಿ ಬರುತ್ತಿಲ್ಲ, ಒಟಿಪಿ ಬಂದರೂ ದಸ್ತಾವೇಜುಗಳ ಅಪ್ಲೋಡ್ ಮಾಡಲು ಭಾರಿ ಸಮಯ ತೆಗೆದುಕೊಳ್ಳುತ್ತಿದೆ. ಆಸ್ತಿಯ ಮಾರ್ಗಸೂಚಿ ದರ ತೋರಿಸದ ಪರಿಣಾಮ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುವುದು ಕೂಡ ವಿಳಂಬವಾಗುತ್ತಿದೆ. ಇದಾದ ನಂತರ ಆನ್ಲೈನ್ ನಲ್ಲಿ ಶುಲ್ಕ ಪಾವತಿಸಲು ಸರ್ವರ್ ಸಮಸ್ಯೆ ಎದುರಾಗಿದೆ. ಒಂದು ಸಲ ಶುಲ್ಕ ಪಾವತಿಸುವಲ್ಲಿ ತೊಂದರೆಯಾದರೆ ಮರು ಪ್ರಯತ್ನಕ್ಕೆ ಎರಡು ಗಂಟೆ ಸಮಯ ಕೇಳುತ್ತದೆ .
ಇನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಾಗವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಫೋಟೋ, ಬೆರಳಚ್ಚು ಪಡೆಯಲು, ಸ್ಕ್ಯಾನಿಂಗ್ ಮಾಡಲು ಸರ್ವರ್ ಕೈಕೊಡುತ್ತಿದೆ. ಅರ್ಧಗಂಟೆಯಲ್ಲಿ ಮುಗಿಯುತ್ತಿದ್ದ ಕೆಲಸಗಳಿಗೆ ದಿನಗಟ್ಟಲೇ ಕಾಯುವಂತಾಗಿದ್ದು, ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ.